ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

© ಹಯಾತ್ ಮೊಹಮ್ಮದ್, ಬಾರ್-ಟೈಲ್ಡ್ ಗಾಡ್ವಿಟ್

ಬಾರ್-ಟೈಲ್ಡ್ ಗಾಡ್ವಿಟ್ ಪಕ್ಷಿಯು Scolopacidae ಕುಟುಂಬಕ್ಕೆ ಸೇರಿದ್ದು, ಸಮುದ್ರ ದಂಡೆಯಲ್ಲಿ ವಾಸಿಸುವ ಪಕ್ಷಿಯಾಗಿದೆ. ಸಾಮಾನ್ಯವಾಗಿ ಗಂಡು ಬಾರ್-ಟೈಲ್ಡ್ ಗಾಡ್ವಿಟ್ ಗಳು ಹೆಣ್ಣು ಪಕ್ಷಿಗಳಿಗಿಂತ ಗಾತ್ರದಲ್ಲಿ ಚಿಕ್ಕದಾಗಿರುತ್ತವೆ. ವಯಸ್ಕ ಪಕ್ಷಿಗಳಿಗೆ ಉದ್ದವಾಗಿ ಮೊನಚಾಗಿರುವ ಕೊಕ್ಕನ್ನು ಹೊಂದಿರುತ್ತವೆ ಹಾಗು ಕಾಲುಗಳು ನೀಲಿ-ಬೂದು ಬಣ್ಣದಿಂದಿರುತ್ತವೆ. ಹೆಚ್ಚಾಗಿ ಸಮುದ್ರ ದಂಡೆಯಲ್ಲಿ ಅಕಶೇರುಕಗಳನ್ನು ತಿನ್ನುತ್ತವೆ ಹಾಗು ಮೃದ್ವಂಗಿಗಳನ್ನು ಸಂಪೂರ್ಣವಾಗಿ ನುಂಗುತ್ತವೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಲ್ಲಿ ಸಂತಾನೋತ್ಪತ್ತಿ ಮಾಡುವ ಇವುಗಳು ಆಳವಿಲ್ಲದ ಪಾಚಿಗಳ ಮೇಲೆ ವೃತ್ತಾಕಾರದಲ್ಲಿ ಗೂಡನ್ನು ಮಾಡಿ ಮೂರರಿಂದ ಐದು ಮೊಟ್ಟೆಗಳನ್ನಿಟ್ಟು ಇಪ್ಪತ್ತರಿಂದ ಇಪ್ಪತೈದು ದಿನಗಳ ಕಾಲ ಕಾವುಕೊಡುತ್ತವೆ. ಹೆಣ್ಣು ಪಕ್ಷಿಗಳು ಬೆಳಕಿದ್ದಾಗ ಕಾವು ಕೊಟ್ಟರೆ ಗಂಡು ಪಕ್ಷಿಗಳು ರಾತ್ರಿಯಲ್ಲಿ ಕಾವುಕೊಡುತ್ತವೆ.

©ಹಯಾತ್ ಮೊಹಮ್ಮದ್,ಕಪ್ಪು ರೆಕ್ಕೆಯ ಸ್ಟಿಲ್ಟ್

ಕಪ್ಪು ರೆಕ್ಕೆಯ ಸ್ಟಿಲ್ಟ್ ಉದ್ದ ಕಾಲಿನ ಪಕ್ಷಿಯಾಗಿದ್ದು ಅವೊಸೆಟ್ ಮತ್ತು ಸ್ಟಿಲ್ಟ್ ಕುಟುಂಬಕ್ಕೆ ಸೇರಿರುತ್ತದೆ. ಹಿಮಾಂಟೋಪಸ್ (Himantopus) ಇದರ ವೈಜ್ಞಾನಿಕ ಹೆಸರು ಗ್ರೀಕ್ ಭಾಷೆಯಿಂದ ಬಂದಿದ್ದು “ಸ್ಟ್ರಾಪ್ ಫೂಟ್” ಅಥವಾ “ಥಾಂಗ್ ಫೂಟ್” ಎಂಬ ಅರ್ಥವನ್ನು ನೀಡುತ್ತದೆ. ವಯಸ್ಕ ಪಕ್ಷಿಗಳು ಮೂವತ್ತರಿಂದ ಮೂವತ್ತೆಂಟು ಸೆಂ.ಮೀ ಉದ್ದವಿರುತ್ತವೆ, ಗುಲಾಬಿ ಬಣ್ಣದ ಉದ್ದನೆಯ ಕಾಲುಗಳು, ಕಪ್ಪಗೆ ತೆಳುವಾದ ಕೊಕ್ಕಿನೊಂದಿಗೆ ದೇಹದ ಮೇಲ್ಭಾಗದಲ್ಲಿ ಕಪ್ಪು ಮತ್ತು ಕೆಳಭಾಗದಲ್ಲಿ ಬಿಳಿಬಣ್ಣವನ್ನು ಹೊಂದಿರುತ್ತದೆ. ಈ ಎಲ್ಲಾ ಸ್ಟಿಲ್ಟ್‌ ಗಳ ಸಂತಾನೋತ್ಪತ್ತಿ ಆವಾಸ ಸ್ಥಾನವೆಂದರೆ ಜವುಗು ಪ್ರದೇಶಗಳು, ಆಳವಿಲ್ಲದ ಸರೋವರಗಳು ಮತ್ತು ಕೊಳಗಳು.
ಇವು ಹಳದಿ ಪದರದ ಮೇಲೆ ಕಪ್ಪು ಚುಕ್ಕೆಗಳಂತೆ ಕಾಣುವ ಮೊಟ್ಟೆಗಳನ್ನಿಡುತ್ತವೆ. ಇವುಗಳು ಹೆಚ್ಚಾಗಿ ಜಲಚರಗಳನ್ನು ಆಹಾರವಾಗಿ ಅವಲಂಬಿಸಿವೆ ತಮ್ಮ ಉದ್ದನೆಯ ಕಾಲುಗಳ ಉಪಯೋಗದಿಂದ ವಿರಳವಾಗಿ ಈಜುತ್ತವೆ ಹಾಗೂ ನೀರಿನಲ್ಲಿ ನಡೆಯುತ್ತಲೇ ಬೇಟೆಯಾಡುತ್ತವೆ.

©ಹಯಾತ್ ಮೊಹಮ್ಮದ್,ಕಂದು-ತಲೆಯ ಗಲ್  

ಕಂದು-ತಲೆಯ ಗಲ್ ಹಕ್ಕಿಗಳು ಮಧ್ಯ ಏಷ್ಯಾದ ಪ್ರಸ್ಥಭೂಮಿಗಳಲ್ಲಿ ತಜಕಿಸ್ತಾನದಿಂದ  ಮಂಗೋಲಿಯಾದ ಓರ್ಡೋಸ್ ವರೆಗೆ ಸಂತಾನೋತ್ಪತ್ತಿ ಮಾಡುತ್ತವೆ. ಭಾರತದ ಕರಾವಳಿಗಳಲ್ಲಿ ಚಳಿಗಾಲದಂದು ವಲಸೆ ಬರುವುದು ಕಾಣಸಿಗುತ್ತದೆ. ಈ ಗಲ್ ಗಳು ಗುಂಪು ಗುಂಪಾಗಿ ಜೌಗು ಪ್ರದೇಶ ಮತ್ತು ಸಮುದ್ರದ ದ್ವೀಪಗಳಲ್ಲಿ ನೆಲದ ಮೇಲೆ ಗೂಡುಕಟ್ಟುತ್ತವೆ. ಇವುಗಳು ಕಾಗೆಗಳಂತೆ ಅವಕಾಶವಾದಿ ಭಕ್ಷಕರಾಗಿರುವುದರಿಂದ ಪಟ್ಟಣಗಳಲ್ಲಿ ಹರಿದಾಡುತ್ತವೆ ಮತ್ತು ಉಳುಮೆ ಮಾಡಿದ ಹೊಲಗಳಲ್ಲಿ ಸಿಗುವ ಅಕಶೇರುಕಗಳನ್ನು ತೆಗೆದುಕೊಳ್ಳುತ್ತವೆ. ಕಂದು-ತಲೆಯ ಗಲ್ ಕಪ್ಪು-ತಲೆಯ ಗಲ್ ಗಿಂತ ಸ್ವಲ್ಪ ದೊಡ್ಡದಾಗಿರುತ್ತದೆ. ಮಸುಕಾದ ಬೂದು ದೇಹ ಹಾಗು  ಬಿಲ್ ಮತ್ತು ಕಾಲುಗಳು ಕೆಂಪು ಬಣ್ಣದ್ದಾಗಿರುತ್ತವೆ. ಈ ಪಕ್ಷಿಗಳಿಗೆ ಎರಡು ವರ್ಷಗಳಾಗುವವರೆಗು ಸಂಯೋಗ ನಡೆಸಲಾಗುವುದಿಲ್ಲ.
ಮೊದಲ ಒಂದು ವರ್ಷದಲ್ಲಿ ಇದರ ಬಾಲದ ತುದಿಯು ಕಪ್ಪು ಬಣ್ಣದಿಂದಿರುತ್ತದೆ ಹಾಗು ರೆಕ್ಕೆಯು ಗಾಢ ಬೂದು ಬಣ್ಣದಿಂದಿರುತ್ತದೆ. ಕ್ರಮೇಣ ಬಾಲದ ತುದಿಯು ಬಿಳಿಬಣ್ಣಕ್ಕೆ ತಿರುಗುತ್ತವೆ ಹಾಗು ರೆಕ್ಕೆಯು ತಿಳಿ ಬೂದು ಬಣ್ಣವಾಗುತ್ತವೆ.   

©ಹಯಾತ್ ಮೊಹಮ್ಮದ್, ಹಾವಕ್ಕಿ  

ಡಾರ್ಟರ್ ಅಥವ ಹಾವಕ್ಕಿ ಇವುಗಳು ಜಲಚರ ಪಕ್ಷಿಗಳಾಗಿದ್ದು ಅನ್ಹಿಂಗಿಡೆ (Anhingidae ) ಕುಟುಂಬಕ್ಕೆ ಸೇರುತ್ತವೆ. ತಮ್ಮ ದೇಹವು ನೀರಲ್ಲಿ ಮುಳುಗಿದ್ದಾಗ ಉದ್ದನೆಯ ಕುತ್ತಿಗೆ ನೀರಿನ ಮೇಲ್ಭಾಗದಲ್ಲಿ ಹಾವಿನಂತೆ ಭಾಸವಾಗುತ್ತವೆ. ಇದರಿಂದಾಗಿ ಹಾವಕ್ಕಿ (Snakebird) ಎಂದು ಸಹ ಇವನ್ನು ಕರೆಯಲಾಗುತ್ತದೆ. ಇವುಗಳಿಗೆ ಜಾಲಪಾದವಿದ್ದು ನೀರಿನಲ್ಲಿ ಸರಾಗವಾಗಿ ಈಜಿ ಬೇಟೆಯಾಡಬಲ್ಲವು. ಡಾರ್ಟರ್‌ ಗಳು ಮುಖ್ಯವಾಗಿ ಮಧ್ಯಮ ಗಾತ್ರದ ಮೀನುಗಳನ್ನು ತಿನ್ನುತ್ತವೆ, ಹೆಚ್ಚು ವಿರಳವಾಗಿ, ಇತರ ಜಲಚರ ಕಶೇರುಕಗಳನ್ನು ಮತ್ತು ಅಕಶೇರುಕಗಳನ್ನು ತಿನ್ನುತ್ತವೆ. ಹಾವಕ್ಕಿಗಳು ಮಾಂಸಹಾರಿ ಪಕ್ಷಿಗಳಾಗಿದ್ದು ಇತರ ಮಾಂಸಹಾರಿ ಪಕ್ಷಿಗಳಾದ ಹದ್ದುಗಳ ಹಾಗೆ ನೀರಿನ ಮೇಲೆಯೇ ಬೇಟೆಯಾಡುವುದಿಲ್ಲ, ಬದಲಾಗಿ ತಮ್ಮ ಬೇಟೆಯನ್ನು ನೀರಿನಲ್ಲಿ ಅಟ್ಟಿಸಿಕೊಂಡು ಹೋಗಿ ಹಿಡಿಯುತ್ತವೆ. ವರ್ಷದ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ನಾಲ್ಕರಿಂದ ಆರು ಮೊಟ್ಟೆಗಳನ್ನು ಇಪ್ಪತ್ತರಿಂದ ನಲ್ವತ್ತೆಂಟು ಗಂಟೆಗಳಲ್ಲಿಟ್ಟು ಇಪ್ಪತೈದರಿಂದ ಮೂವತ್ತು ದಿನಗಳ ಕಾಲ ಕಾವುಕೊಟ್ಟು ಮರಿಮಾಡುತ್ತವೆ. ಈ ಪಕ್ಷಿಗಳು ಲೈಂಗಿಕ ಪ್ರಬುದ್ಧತೆಯನ್ನು ತಲುಪಲು ಸುಮಾರು ಎರಡು ವರ್ಷಗಳ ಕಾಲ ತೆಗೆದುಕೊಳ್ಳುತ್ತವೆ ಮತ್ತು ಸಾಮಾನ್ಯವಾಗಿ ಒಂಬತ್ತು ವರ್ಷಗಳವರೆಗೆ ಬದುಕುತ್ತವೆ.

ಚಿತ್ರಗಳು:ಹಯಾತ್ ಮೊಹಮ್ಮದ್
ವಿವರಣೆ: ಧನರಾಜ್ ಎಂ

Print Friendly, PDF & Email
Spread the love
error: Content is protected.