ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

© ಭಗವತಿ ಬಿ.ಎಮ್, ನೀಲಿ ಹುಲಿಚಿಟ್ಟೆ 

ದಕ್ಷಿಣ ಏಷ್ಯಾದಲ್ಲಿ ಕಂಡು ಬರುವ ಈ ನೀಲಿ ಹುಲಿ ಚಿಟ್ಟೆಗಳ ರೆಕ್ಕೆಯ ಮೇಲ್ಭಾಗವು ನೀಲಿ ಹಾಗು ಗಾಢಕಪ್ಪು ಗೆರೆಗಳಿಂದ ಕೂಡಿದ್ದು ತನ್ನ ಹಾರಾಟಕ್ಕೆ ಅನುಕೂಲವಾಗುವಂತೆ ಸೂರ್ಯನಿಂದ ಶಾಖವನ್ನು ನೇರವಾಗಿ ತಮ್ಮ ರೆಕ್ಕೆಗಳ ಮೂಲಕ ಹೀರಿಕೊಳ್ಳುತ್ತವೆ. ರೆಕ್ಕೆಗಳ ಮೇಲ್ಮೈಯಲ್ಲಿರುವ ಕಪ್ಪು ಪ್ರದೇಶಗಳು ಶಾಖ ಹೀರಿಕೊಳ್ಳುವ ಪ್ರದೇಶಗಳಾಗಿವೆ, ಅದು ಸ್ವತಂತ್ರವಾದ ಹಾರಾಟಕ್ಕೆ ಅನುಕೂಲವಾಗುತ್ತದೆ. ಕಾಕ(ಕ್ರೋಸ್) ಮತ್ತು ಹುಲಿ(ಟೈಗರ್ಸ್) ಪ್ರಭೇದದ ಈ ಚಿಟ್ಟೆಯು ಕುಚ್ಚು ಪಾದದ(ಬ್ರಷ್ ಫೂಟೆಡ್) ಚಿಟ್ಟೆಗಳ ಕುಟುಂಬಕ್ಕೆ ಸೇರುತ್ತವೆ. ಸಣ್ಣ ಕಂಬಳಿ ಹುಳುಗಳು ಮೊಟ್ಟೆಯಿಂದ ಹೊರಬಂದಾಗ ಸುಮಾರು 1.5 ಸೆಂ.ಮೀ ಉದ್ದವಿರುತ್ತದೆ. ಅದೇ ನಲವತ್ತೆಂಟು ಗಂಟೆಗಳಲ್ಲಿ ನಾಲ್ಕರಿಂದ ಐದುಪಟ್ಟು ಗಾತ್ರ ಹೆಚ್ಚುತ್ತವೆ. ಈ ಪ್ರಭೇದದ ಕಂಬಳಿ ಹುಳು(ಲಾರ್ವಾ)ಗಳು ಸಾಮಾನ್ಯವಾಗಿ ಮಿಲ್ಕ್ ವೀಡ್(asclepiadaceae) ಕುಟುಂಬದ ಸಸ್ಯಗಳನ್ನು ತಿನ್ನುತ್ತವೆ. ಉದಾಹರಣೆಗೆ: ಎಕ್ಕದ ಗಿಡ (calotropis), ಹೆಗಲ ಸಪ್ಪು (dregea volubilis), ಕಡಹಾಲೆ ಬಳ್ಳಿ(marsdenia roylei), ವಿಷತೀಟೆ (marsdenia tenacissima), ಬುಡಬುಡಕೆ ಕಾಯಿ (crotalaria alata) ಮತ್ತು ಗಿಲಿಗಿಲಿ ಗಿಡ(crotalaria albia).

©ಭಗವತಿ ಬಿ.ಎಮ್,ಹುಲಿ ಚಿಟ್ಟೆ

ನೀಲಿ ಹುಲಿ ಚಿಟ್ಟೆಯ ಹಾಗೆಯೇ ಹುಲಿ ಚಿಟ್ಟೆಯೂ (ಪ್ಲೇನ್ ಟೈಗರ್) ಕೂಡ ಕಾಕಾ (ಕ್ರೋಸ್) ಮತ್ತು ಹುಲಿ (ಟೈಗರ್ಸ್) ಪ್ರಭೇದದ ಈ ಚಿಟ್ಟೆಯು ಕುಚ್ಚು ಪಾದದ (ಬ್ರಷ್ ಫೂಟೆಡ್) ಚಿಟ್ಟೆಗಳ ಕುಟುಂಬಕ್ಕೆ ಸೇರುತ್ತವೆ. ಏಷ್ಯಾ, ಆಸ್ಟ್ರೇಲಿಯಾ ಮತ್ತು ಆಫ್ರಿಕಾದಲ್ಲಿ ವ್ಯಾಪಕವಾಗಿ ಹರಡಿರುವ ಮಧ್ಯಮ ಗಾತ್ರದ ಚಿಟ್ಟೆಯಾಗಿದ್ದು ಇದನ್ನು ಆಫ್ರಿಕನ್ ರಾಣಿ ಎಂದು ಕೂಡ ಕರೆಯಲಾಗುತ್ತದೆ. ಹುಲಿ ಚಿಟ್ಟೆ ಬಣ್ಣವನ್ನು ಇತರ ಜಾತಿಯ ಚಿಟ್ಟೆಗಳು ವ್ಯಾಪಕವಾಗಿ ಅನುಕರಿಸುತ್ತವೆ. ಇವುಗಳು ವಿವಿಧ ರೀತಿಯ ಆವಾಸ ಸ್ಥಾನಗಳಲ್ಲಿ ವಾಸಿಸುತ್ತದೆ, ಆದರೆ ಇದರ ಅಭಿವೃದ್ಧಿಯು ಕಾಡಿನಂತಹ ಪ್ರದೇಶಗಳಲ್ಲಿ ಕಡಿಮೆ ಮತ್ತು ಹೆಚ್ಚಾಗಿ ಒಣ, ವಿಶಾಲ-ತೆರೆದ ಪ್ರದೇಶಗಳಲ್ಲಿ ಕಂಡುಬರುತ್ತದೆ. ಹುಲಿ ಚಿಟ್ಟೆಗಳು ವಿವಿಧ ಹೂ ಬಿಡುವ ಸಸ್ಯಗಳಿಂದ ಮಕರಂದವನ್ನು ಪಡೆಯುತ್ತವೆ. ಇವುಗಳು ಋತುಮಾನಗಳಿಗನುಸಾರವಾಗಿ ಬದಲಾಗುತ್ತವೆ. ಏಕೆಂದರೆ ಇವುಗಳು ಅವಲಂಬಿಸಿರುವ ಸಸ್ಯಗಳು ವರ್ಷವಿಡೀ ಹೂ ಬಿಡುವುದಿಲ್ಲವಾದ್ದರಿಂದ, ಈ ಪ್ರಭೇದದ ಕಂಬಳಿ ಹುಳುಗಳು ಸಾಮಾನ್ಯವಾಗಿ ಅಸ್ಕ್ಲೆಪಿಯಾಸ್ಕುಲದ(ಹೊಳೆ ಚದರಂಗ) ಸಸ್ಯಗಳನ್ನು ಸೇವಿಸುತ್ತವೆ.
ಭಾರತದಲ್ಲಿ ಇವುಗಳು ಈ ಬಗೆಯ ಸಸ್ಯಗಳನ್ನು ಅವಲಂಬಿಸಿವೆ: ನಿತ್ಯಪುಷ್ಪ (catharanthus roseus), ಲಂಟಾನ (lantana camara), ಕರೆವ್ಯಾದಿ (vernonia cinerea), ಮೂಗುತಿ ಗಿಡ (asystasia gangetica) ಮತ್ತು ಗಂಟೆ ಹೂ (tecoma stans).

©ಭಗವತಿ ಬಿ.ಎಮ್,ಪಟ್ಟೆ ಹುಲಿ ಚಿಟ್ಟೆ   

ಎಲ್ಲಾ ರೀತಿಯ ಕಾಕ (ಕ್ರೋಸ್) ಮತ್ತು ಹುಲಿ (ಟೈಗರ್ಸ್) ಪ್ರಭೇದದ ಕುಚ್ಚು ಪಾದದ (ಬ್ರಷ್ ಫೂಟೆಡ್) ಚಿಟ್ಟೆಗಳ ಕುಟುಂಬಕ್ಕೆ ಸೇರುವ ಸಾಮಾನ್ಯ ಹುಲಿ(ಸ್ಟ್ರೈಪಡ್ ಟೈಗರ್)ಯು ಅಮೇರಿಕದ ಮೊನಾರ್ಕ್ ಚಿಟ್ಟೆಯನ್ನು ಹೋಲುತ್ತದೆ. ರೆಕ್ಕೆಗಳ ಅಂಚುಗಳು ಎರಡು ಸಾಲುಗಳ ಬಿಳಿಚುಕ್ಕೆಗಳೊಂದಿಗೆ ಕಪ್ಪುಬಣ್ಣದ್ದಾಗಿರುತ್ತವೆ. ರೆಕ್ಕೆಗಳ ಕೆಳಭಾಗವು ಮೇಲ್ಭಾಗವನ್ನು ಹೋಲುತ್ತದೆ, ಆದರೆ ಬಣ್ಣಗಳಿಂದ ಕೂಡಿರುತ್ತವೆ. ಭಾರತ, ಶ್ರೀಲಂಕಾ, ಮ್ಯಾನ್ಮಾರ್‌, ಆಗ್ನೇಯಏಷ್ಯಾ ಮತ್ತು ಆಸ್ಟ್ರೇಲಿಯಾದ್ಯಂತ ವಿಸ್ತರಿಸಲಾಗಿದೆ. ಹೆಚ್ಚಾಗಿ ಈ ಚಿಟ್ಟೆಗಳು ಮಧ್ಯಮ ಮತ್ತು ಭಾರೀಮಳೆಯ ಪ್ರದೇಶಗಳಿಗೆ ಆದ್ಯತೆ ನೀಡುತ್ತದೆ. ಅದಲ್ಲದೆ ತೇವಾಂಶವುಳ್ಳ ಒಣ ಎಲೆ ಉದುರುವ ಕಾಡುಗಳಲ್ಲಿಯೂ ಕೂಡ ಕಂಡುಬರುತ್ತವೆ. ಇವುಗಳು ತಾವು ಅವಲಂಬಿಸಿರುವ ಸಸ್ಯಗಳ ಎಲೆಗಳ ಕೆಳಗೆ ಮೊಟ್ಟೆ ಇಡುತ್ತದೆ. ಕಂಬಳಿ ಹುಳು (ಲಾರ್ವ)ಗಳನ್ನು ಕಪ್ಪು, ಹಳದಿ ಮತ್ತು ನೀಲಿ-ಬಿಳಿಕಲೆಯ ರೇಖೆಗಳಿಂದ ಗುರುತಿಸಲಾಗುತ್ತದೆ. ಹುಟ್ಟಿದ ಕಂಬಳಿ ಹುಳುಗಳು ಮೊಟ್ಟೆಯ ಮೇಲ್ಪದರವನ್ನು ತಿಂದನಂತರ ಎಲೆಯನ್ನು ತಿಂದು ಹಸಿರು ಮತ್ತು ಹಳದಿ ಬಣ್ಣದ ಪೊರೆಹುಳು (ಪ್ಯೂಪಾ)ದಿಂದ ಚಿಟ್ಟೆಯಾಗಿ ಹೊರಬರುವುದನ್ನು ಕಾಣಬಹುದು. ಅವಲಂಬಿತ ಸಸ್ಯಗಳು: ಹೊಳೆ ಚದರಂಗ (asclepias curassavia), ಹಲ್ಲುಕ (ceropegia bulbosa), ಜಾತಿಲಿ(ceropegia juncea), ಬಿತ್ತರಿಗೆ(ceropegia tuberosa), ಕೋಡುಮೂರ್ಕ ಬಳ್ಳಿ (cynanchum tunicatum) ಮತ್ತು ಆಡುಮುಟ್ಟದ ಬಳ್ಳಿ (tylophora indica)

©ಭಗವತಿ ಬಿ.ಎಮ್, ಮಾಸಲು ಚಿಟ್ಟೆ  

ಮಾಸಲು ಚಿಟ್ಟೆ (ಕಾಮನ್ ಗಲ್) ಚಿಟ್ಟೆಯು ಹಳದಿ ಮತ್ತು ಬಿಳಿಯರು ಪ್ರಭೇದದ ಪಿಯರಿಡೆ ಕುಟುಂಬದ ಸಣ್ಣ ಚಿಟ್ಟೆಯಾಗಿರುತ್ತದೆ. ಇದು ಭಾರತ, ಶ್ರೀಲಂಕಾ, ಚೀನಾ, ಆಗ್ನೇಯ ಏಷ್ಯಾ ಮತ್ತು ಇಂಡೋನೇಷ್ಯಾಕ್ಕೆ ಹೆಚ್ಚಾಗಿ ಕಂಡುಬರುತ್ತವೆ. ಗಂಡು ಚಿಟ್ಟೆಯ ಮೇಲ್ಭಾಗವು ಬಿಳಿ ಹಾಗು ರೆಕ್ಕೆಗಳ ಬುಡದಲ್ಲಿ ಮತ್ತು ರಕ್ತನಾಳಗಳ ಉದ್ದಕ್ಕೂ ಬೂದು-ನೀಲಿ, ಕೆಳಭಾಗದಲ್ಲಿ ಕಪ್ಪುಗುರುತುಗಳಿಂದಾಗಿ ಕೂಡಿರುತ್ತದೆ. ಹೆಣ್ಣುಚಿಟ್ಟೆಗಳು ಗಂಡನ್ನೇ ಹೋಲುತ್ತವೆ, ಆದರೆ ಕಪ್ಪು ರೇಖೆಗಳು ಸ್ವಲ್ಪ ದೊಡ್ಡದಾಗಿ ಮತ್ತು ಇನ್ನು ಗಾಢವಾಗಿರುವುದು ಕಾಣುತ್ತದೆ. ಇದರ ಲಾರ್ವವು ಬಿಳಿಚುಕ್ಕೆ ಹಾಗು ಗೆರೆಗಳಿಂದ ಕಾಣುತ್ತವೆ ಮತ್ತು ಪ್ಯೂಪವು ಹಸಿರು ಬಣ್ಣದ್ದಾಗಿರುತ್ತದೆ. ಈ ಪ್ರಭೇದದ ಕಂಬಳಿ ಹುಳು (ಲಾರ್ವಾ) ಗಳು ಸಾಮಾನ್ಯವಾಗಿ ಕ್ಯಾಪರೇಸಿ ಕುಟುಂಬದ ಸಸ್ಯಗಳನ್ನು ತಿನ್ನುತ್ತವೆ. ಉದಾಹರಣೆಗೆ: ಮರಗಡೆ (cadaba fruticose) ಮತ್ತು ಬಲಯ (cadaba trifoliata).

ಚಿತ್ರಗಳು:  ಭಗವತಿ ಬಿ.ಎಮ್
ವಿವರಣೆ: ಧನರಾಜ್ ಎಂ

Print Friendly, PDF & Email
Spread the love
error: Content is protected.