ನೀವೂ ಕಾನನಕ್ಕೆ ಬರೆಯಬಹುದು

ಜೂನ್ ತಿಂಗಳು ಕಾಲಿರಿಸಿದೆ, ಕಾಡಿನ ಜೀವನದಲ್ಲಿ ಬದಲಾವಣೆ ತರಲಿದೆ. ನವಿಲು ಗರಿಗೆದರಿ ನರ್ತಿಸತೊಡಗಿದರೆ ಕಾಡಿಗೆ ಮುಂಗಾರು ಮಳೆಯ ಆಗಮನ ನಿಶ್ಚಯ ಎಂದು ಒಂದು ನಂಬಿಕೆ. ಮಳೆ ಎಂದರೆ ಹಾಗೇನೇ, ಎಲ್ಲರ ಮನಸ್ಸಿಗೂ ಖುಷಿಯ ಔತಣ ಬಡಿಸುತ್ತದೆ. ಅದರಲ್ಲೂ ಭೂಮಿಗೆ… ಇಷ್ಟು ದಿನಗಳ ಕಾಲ ಬಿಸಿಲಿನ ಬೇಗೆಗೆ ತತ್ತರಿಸಿ, ಬಿಸಿಯುಸಿರನ್ನು ಹೊರ ಹಾಕುತ್ತಾ, ಇನ್ನೂ ನನ್ನಿಂದ ಸಹಿಸಲು ಆಗದು ಎಂದು ಆಗಸದ ಕಡೆ ಮುಖ ಮಾಡಿ, ಮಳೆಯನ್ನು ಆಮಂತ್ರಿಸಲು ಕಾತುರದಿಂದ ಕಾಯ್ದು ಕುಳಿತುಕೊಂಡಿದೆ. ಆದರೆ ಕರಿ ಮೋಡಗಳು ಮಾತ್ರ ಗಿರಿ-ಶಿಖರಗಳ ಮಧ್ಯೆ ಧರೆಯ ಕಡೆ ಮಂದಹಾಸ ಬೀರುತ್ತಾ ಸ್ವಚ್ಛಂದ ಆಕಾಶದಲ್ಲಿ ತೇಲಾಡುತ್ತಿರುತ್ತವೆ. ಯವಾಗ ಅವುಗಳ ತೂಕ ಜಾಸ್ತಿಯಾಗುತ್ತದೋ, ಕೊನೆಗೆ ಆರ್ಭಟಿಸುತ್ತ, ಮಿಂಚಿಸುತ್ತ ಹನಿಯಾಗಿ ಧರೆಗೆ ಸೇರುತ್ತಾ, ಬಿಸಿ ಬಿಸಿ ಇಳೆಯನ್ನು ಹಸಿಯಾಗಿ ಮಾಡುತ್ತದೆ. ಇಷ್ಟಕ್ಕೂ ಮಳೆಯೇನು ಬರುವುದು ಮೇಲಿನಿಂದಲ್ಲ, ಕೆಳಗಿನಿಂದಲೇ ಅಂದರೆ ಆಶ್ಚರ್ಯವಾಗಬೇಕಲ್ಲ, ಆಗಲೇಬೇಕು! ಏಕೆಂದರೆ ಇಳೆಯಲ್ಲಿರುವ ನೀರು ಆವಿಯಾಗಿಯೇ ಮೋಡಗಳಾಗುವುದು ಮತ್ತೆ ಮೋಡದಿಂದ ಹನಿಯಾಗಿ ಧರೆ ಸೇರುವುದು. ಇದನ್ನು ಜಲಚಕ್ರ ಎಂದು ಕರೆಯುತ್ತಾರೆ.

ಕೊನೆಗೂ ಮಳೆಯು ಭುವಿಯ ಸೇರಿತೆಂದರೆ, ಇಷ್ಟು ದಿನ ನೆಲದಲ್ಲಿ ಅವಿತು ಕುಳಿತಿದ್ದ ಬೀಜಗಳೆಲ್ಲಾ ಮೊಳಕೆಯೊಡೆದು “ನಾನು ಹೊರಗೆ ಬಂದೆ” ಎಂದು ಕೇಕೇ ಹಾಕುತ್ತವೆ. ಇಷ್ಟು ದಿನ ನೀರಿಗಾಗಿ ಪರದಾಡುತ್ತಿದ್ದ ಜೀವ ಸಂಕುಲಗಳು ಮಳೆಯ ಹನಿಗಳನ್ನು ನೋಡಿ ತನ್ನ ಮನದ ಮೂಲೆಯಲ್ಲಿ ಅಡಗಿ ಕುಳಿತಿದ್ದ ಖುಷಿಯನ್ನು ನೃತ್ಯದ ಮೂಲಕವೋ, ಜಿಗಿಯುವ ಮೂಲಕವೋ ಅಥವಾ ಮಳೆಯಲ್ಲಿ ಮಿಂದುವ ಮೂಲಕವೋ ತಮ್ಮ ಖುಷಿಯನ್ನು ಹೊರ ಹಾಕುತ್ತವೆ. ಇನ್ನು ಕಪ್ಪೆಗಳಂತೂ ಸಂಗೀತದ ಕಛೇರಿಯನ್ನೇ ಶುರುಮಾಡಿಬಿಡುತ್ತವೆ. ಸೂರ್ಯನ ಕಿರಣ ಮಳೆ ಹನಿಗಳ ಮೇಲೆ ಬಿದ್ದಾಗ, ರಂಗು ರಂಗಾದ ಕಾಮನ ಬಿಲ್ಲನ್ನು ಆಕಾಶದಲ್ಲಿ ಮೂಡಿಸುತ್ತದೆ. ಕೊನೆಗೆ ಮಳೆ ಹನಿಗಳು ನೀರಿನ ಮೂಲಗಳಲ್ಲಿ ಸೆರೆಯಾಗುತ್ತದೆ.  ಮಳೆಯು ಪ್ರಕೃತಿ ಮಾತೆಗೆ ಹೊಸ ಶೋಭೆಯನ್ನೇ ತಂದುಕೊಡುತ್ತದೆ. ಆ ಶೋಭೆಯನ್ನು ನೋಡಲು ಎರಡು ಕಣ್ಣುಗಳು ಸಾಲದು. ಮನಸ್ಸು ಪ್ರಕೃತಿಮಾತೆಯ ಸೌಂದರ್ಯಕ್ಕೆ ಸೂರೆಗೊಂಡಿರುತ್ತದೆ. ಎಲ್ಲರೂ ಮಳೆಗಾಲವನ್ನು ಸ್ವಾಗತಿಸೋಣ… ಮತ್ತು ಈ ಜೂನ್ ತಿಂಗಳ ಸಂಚಿಕೆಗೆ ಮಳೆ, ಮುಂಗಾರು, ಹಸಿರು ಹಾಗೂ ರೈತನ ಕೃಷಿಯ ತಯಾರಿಗಳು ಜೊತೆಗೆ ಜೀವ ವೈವಿಧ್ಯತೆ  ಕುರಿತ, ಕಾಡು, ಕಾಡಿನ ಕತೆಗಳು, ಜೀವ ವಿಜ್ಞಾನ, ವನ್ಯ ವಿಜ್ಞಾನ, ಕೀಟಲೋಕ, ಕೃಷಿ, ವನ್ಯಜೀವಿ ಛಾಯಾಚಿತ್ರಗಳು, ಕವನ (ಪರಿಸರಕ್ಕೆ ಸಂಬಂಧಿಸಿದ), ವರ್ಣಚಿತ್ರಗಳು ಮತ್ತು ಪ್ರವಾಸ ಕತೆಗಳು, ಪರಿಸರಕ್ಕೆ ಸಂಬಂಧ ಪಟ್ಟ ಎಲ್ಲಾ ಲೇಖನಗಳನ್ನು ಆಹ್ವಾನಿಸಲಾಗಿದೆ. ಇ-ಮೇಲ್ ಅಥವಾ ಪೋಸ್ಟ್ ಮೂಲಕ ಕಳಿಸಬಹುದು.

ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
Study House,
ಕಾಳೇಶ್ವರಿ ಗ್ರಾಮ,
ಆನೇಕಲ್ ತಾಲ್ಲೂಕು,
ಬೆಂಗಳೂರು ನಗರ ಜಿಲ್ಲೆ,
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.

Print Friendly, PDF & Email
Spread the love
error: Content is protected.