ಬಸವನ ಹುಳು

ಬಸವನ ಹುಳು

ಯಾರೇ ನೀ ಹುಳುವೇ ಮೃದುವಂಗಿಯ ಮಾಣಿಕ್ಯವೆ
ಬೆಳ್ಳಿ ಬೆಳಕಿನ ಪಥವ ರಚಿಸಿ ಬನದಲೆಯಲಿ ತೆರಳಿರುವೆ
ಭುವಿ ಬಕುಳದಿ ಕಂಗೊಳಿಸೊ ಕಾನನದ ಕುಸುರಿ ಕಲೆಯೆ
ತೇರ ತೋರಣದ ಶಂಖನರಳಿಸಿ ಹೊತ್ತು ಹೊರಟಿರುವೆ.
ಹೂಮಾಲೆಯ ಅಂಬರದಲಿ ಮೈಮೆರೆಯೊ ಮಕರಂದವೆ
ಚುಂಬಿಸಿ ಸವಿ ಸವೆದು ಸಿಹಿ ನೆನಪ ಹೊತ್ತು ಹೊರಟಿರುವೆ.

ಮಧಿಸಿದ ಜಡ ಮಣ್ಣನು ಜಡ ಮರವನು ಮಂಥನಿಸಿ
ಅಣು ಕಣದಲಿ ಸತ್ವ ಸಾರವ ಪಸರಿಸಿದ ಶಂಬಕ ಹುಳುವೆ.
ವನ ದೇವಿಯ ಕೊರಳಲಿ ಕೋಲ್ಮಿಂಚಿನ ಕಣ್ಣಾಲೆಯೆ
ಮೊರೆವ ತೊರೆಯೊಡಲಲಿ ಸದ್ದಿಲ್ಲದೆ ಸಾಗುವ ಬನದುಳುವೆ
ಓ ಬಸವನ ಹುಳುವೇ ಮಿಂಚಿ ಮರೆಯಾಗುವೆಯೇಕೆ ಮೌನವೆ
ತನು ಮನಸಿನ ಮೆದು ಮಾಂತ್ರಿಕ ಮಂದಾಸಿನ ಚಿಪ್ಪಿನುಳವೆ

ನೆಲ ಜಲದಲಿ ಬರ ಭುವಿಯಲಿ ಸಾಗುವ ನಿನ್ನಂದದ ಹಾದಿ
ಕಣ್ಣರಳಿಸಿ ಕನವರಳಿಸಿ ಪರಿಶುದ್ಧದ ಪರಿಸರಕೆ ನೀ ನಾಂದಿ
ಬಸಿರೊಡಲಿನ ಬಡ ಜೀವಕೆ ಭಕ್ಷ ಬೋಜನದ ಸವಿಯಾಗಿ
ಕಣ ಕೀಟದ ನವ ಜೀವದ ಕನಸಿನಾಲಯಕೆ ಕಾರುಣ್ಯವಾಗಿ
ನಿನ್ನ ಚಿಪ್ಪಿನರಮನೆಯ ಕೆತ್ತನೆಗೆ ಮನಸೋತ ಮನುಜ ಮನೆಗೆ
ಜೀವೋತ್ಸವ ಜಯಮಾಲೆಯ ಹೊಂಬಣ್ಣದ ಸರಮಾಲೆಯಾದೆ

ಭುವಿ ಪುತ್ರನ ಅರವಿನಜ್ಞಾನಕೆ ನೀ ನಾಶಕನಾಗಿಹಿದುಂಟು
ನಿಸ್ವಾರ್ಥದ ನಿನ್ನ ಸೇವೆಯ ಕಾಯಕವ ಅರಿವವರು ಯಾರುಂಟು
ಬಹುವಿರಳ ಬಡ ಜೀವಕೆ ಬದುಕಿ ತೋರುವವರು ಯಾರುಂಟು
ಜೀವಾಂಕುಲಕೆ ನಿನ್ನ ಸರಪಳಿ ಕೊಂಡಿಯ ಆಧಾರದ ಅರಿವುಂಟು
ಪರಿಸರದ ಅನುಗಾಲದ ಸರಿಸಮಕೆ ನೀ ಜೀವಿಸುವುದುಂಟು
ನಲುಗದಿರು ನಸಿಸುವ ನಿನಕುಲಕೆ ಸಂರಕ್ಷರ ಮನದಂಗಳವುಂಟು

       – ಓಬಯ್ಯ ಬಿ.
                            ATREE, ಬೆಂಗಳೂರು ಜಿಲ್ಲೆ


Print Friendly, PDF & Email
Spread the love
error: Content is protected.