ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

© ಹಯಾತ್ ಮೊಹಮ್ಮದ್, ಕನ್ನಡಿಜೇಡ

ವೈಜ್ಞಾನಿಕವಾಗಿ ಟ್ವೈಟೇಶಿಯಾ ಅರ್ಜೆಂಟಿಯೋಪಂಕ್ಟಾಟಾ ಎಂದು ಕರೆಯಲ್ಪಡುವ ಈ ಕನ್ನಡಿ ಅಥವಾ ಸೀಕ್ವಿನ್ಡ್ ಜೇಡಗಳು ಬೆಳಕು ಪ್ರತಿಫಲಿಸುವಂತೆ ಬೆಳ್ಳಿಯ ಲೇಪನವನ್ನು ಹೊಂದಿರುತ್ತದೆ. ನೋಡುಗರಿಗೆ ಕನ್ನಡಿಯ ಚೂರುಗಳು ಜೇಡದ ಮೇಲ್ಭಾಗಕ್ಕೆ ಅಂಟಿಕೊಂಡಂತೆ ಕಾಣುತ್ತದೆ. ಅಚ್ಚರಿಯೇನೆಂದರೆ ಈ ಜೇಡಗಳು ಜೀವಭಯದಿಂದ ಹೆದರಿದಂತೆಲ್ಲಾ ತನ್ನ ಮೈ ಮೇಲಿರುವ ಕನ್ನಡಿಯ ಗಾತ್ರವು ಬದಲಾಗುತ್ತಾ ಹೋಗುತ್ತದೆ. ಇದರ ಮೈ ಮೇಲಿನ ಕನ್ನಡಿ ಚೂರಿನ ಮೇಲಿನಿಂದ ಬೆಳಕನ್ನು ಚದುರಿಸುತ್ತವೆ. ಇದರಿಂದ ಪರಭಕ್ಷಕಗಳಿಗೆ ಅದನ್ನು ನೋಡಲು ಕಷ್ಟವಾಗುತ್ತದೆ. ಒಂದು ಹನಿಯ ನೀರಿನಂತೆ ಇದರ ಮೇಲ್ಭಾಗವು ಹೊಳೆಯುತ್ತವೆ, ಇದರಿಂದಾಗಿ ಇತರ ಪರಭಕ್ಷಕಗಳಿಗೆ ಅದು ಮಳೆಹನಿಯಂತೆಯೇ ಭಾಸವಾಗುತ್ತದೆ. ಉಳಿದ ಜೇಡಗಳಂತೆಯೆ ಗಂಡು ಸಣ್ಣದಾಗಿದ್ದು ಹೆಣ್ಣು ಜೇಡವು ತುಸು ದೊಡ್ಡದಾಗಿರುತ್ತದೆ. ಹೊಟ್ಟೆಯನ್ನು  ಹಸಿರು, ಹಳದಿ ಮತ್ತು ಕೆಂಪು ಬಣ್ಣದಿಂದ ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ.

©ಹಯಾತ್ ಮೊಹಮ್ಮದ್,ಹಂಟ್ಸ್ಮನ್ ಜೇಡ

ಪಕ್ಷಿಗಳಿಗೆ, ಚಿಟ್ಟೆಗಳಿಗೆ, ಕೀಟಗಳಿಗೆ ಮತ್ತು ಜೇಡಗಳಿಗೆ ತಮ್ಮ ಹೆಸರು ಅವುಗಳ ಬಣ್ಣ, ಆಕಾರ, ಚಲನವಲನಗಳಿಗೆ ಅನುಸಾರವಾಗಿ ನೀಡಲಾಗುತ್ತದೆ. ಈ ಮೇಲಿನ ಹಂಟ್ಸ್ಮನ್ ಜೇಡವೂ ಕೂಡ ಹಾಗೆಯೇ ಇವುಗಳ ವೇಗ ಮತ್ತು ಬೇಟೆಯ ವಿಧಾನದಿಂದ ಕರೆಯಲಾಗುತ್ತದೆ. ಸಾಮಾನ್ಯವಾಗಿ ಕಾಡುಗಳು, ಬಂಡೆಗಳು ಹಾಗು ಮರದ ಪೊಟರೆಗಳಲ್ಲಿ ಕಂಡುಬರುತ್ತವೆ. ಸ್ಪರಾಸಿಡ್ಗಳ ಕುಟುಂಬಕ್ಕೆ ಸೇರಿರುವ ಎಲ್ಲಾ ಜೇಡಗಳಿಗು ಎಂಟು ಕಣ್ಣುಗಳು ಇರುವುದರಿಂದ ಹಂಟ್ಸ್ಮನ್ ಜೇಡಕ್ಕೂ ಕೂಡ ಎಂಟು ಕಣ್ಣುಗಳಿರುತ್ತವೆ. ಸಾಮಾನ್ಯವಾಗಿ ಈ ಜೇಡಗಳು ಜಿರಳೆಗಳನ್ನು ತಿನ್ನುತ್ತವೆ. ಇದರಿಂದಾಗಿ ಹೆಚ್ಚಾಗಿ ಮನೆಗಳಲ್ಲಿ ಕಾಣಸಿಗುತ್ತವೆ. ಉಳಿದ ಜೇಡಗಳಂತೆ ಇವುಗಳು ಜಾಲವನ್ನು ನಿರ್ಮಿಸುವುದಿಲ್ಲ ಬದಲಾಗಿ ಇವುಗಳ ಆಹಾರವು ಕೀಟಗಳು ಮತ್ತು ಇತರ ಅಕಶೆರುಕಗಳನ್ನು ಒಳಗೊಂಡಿದೆ.  ಮೊಟ್ಟೆಯ ಚೀಲಗಳನ್ನು ಹೆಣ್ಣಿನ ದೇಹದ ಕೆಳಗೆ ಕೊಂಡೊಯ್ಯಲಾಗುತ್ತದೆ, ಆದರೆ ಪಾಲಿಸ್ಟೆಸ್ ಮತ್ತು ಸ್ಯೂಡೋಮೈಕ್ರೊಮಾಟಾ ಎಸ್ಪಿಪಿ ಯಂತಹ ಇತರ ಪ್ರಭೇದಗಳಲ್ಲಿ, ಹೆಣ್ಣು ಸಾಮಾನ್ಯವಾಗಿ ಮೊಟ್ಟೆಯ ಚೀಲಗಳನ್ನು ಸಸ್ಯವರ್ಗಕ್ಕೆ ಜೋಡಿಸುತ್ತವೆ.

©ಹಯಾತ್ ಮೊಹಮ್ಮದ್,ಸೆಲ್ಲಾರ್ಸ್ಪೈಡರ್   

“ಡ್ಯಾಡಿ ಲಾಂಗ್-ಲೆಗ್ಸ್” ಎಂಬ ಸಾಮಾನ್ಯ ಹೆಸರನ್ನು ಹಲವಾರು ಪ್ರಭೇದಗಳಿಗೆ ಬಳಸಲಾಗುತ್ತದೆ. ಈ ಜೇಡಗಳು ದೇಹವು ಸರಿಸುಮಾರು 3-8 ಮಿಮೀ ಇದ್ದರೆ ಇದರ ಕಾಲುಗಳು 50 ಮಿಮೀ ಉದ್ದವಿರಬಹುದು. ಅಂಟಾರ್ಕ್ಟಿಕಾವನ್ನು ಹೊರತುಪಡಿಸಿ ವಿಶ್ವದ ಎಲ್ಲಾ ಮೂಲೆಗಳಲ್ಲಿ ಇವುಗಳು ಕಂಡುಬರುತ್ತವೆ. ಸೆಲ್ಲಾರ್ ಜೇಡಗಳು ಗುಹೆಗಳಲ್ಲಿ, ಬಂಡೆಗಳ ಕೆಳಗೆ ಮತ್ತು ಸಡಿಲವಾದ ಮರದ ತೊಗಟೆಗಳಲ್ಲಿ ಕಂಡುಬರುತ್ತವೆ ಮತ್ತು ಮಾನವ ವಾಸಸ್ಥಳಗಳಾದ ಬಿರುಕು ಬಿಟ್ಟಿರುವ ಗೋಡೆಗಳಲ್ಲಿ ಕಟ್ಟಡಗಳಲ್ಲಿ ಜಾಲಗಳನ್ನು ನಿರ್ಮಿಸಿಕೊಂಡಿರುತ್ತವೆ ಆದ್ದರಿಂದ “ಸೆಲ್ಲಾರ್ ಸ್ಪೈಡರ್” ಎಂಬ ಸಾಮಾನ್ಯ ಹೆಸರು. ಈ ಜೇಡಗಳು ಇನ್ನಿತರ ಪ್ರಭೇದದ ಜೇಡಗಳ ಮೊಟ್ಟೆಯ ಮೇಲೆ ಅಥವ ಜೇಡವನ್ನು ಬೇಟೆಯಾಡಲು ಅವುಗಳ ಜಾಲದ ಮೇಲೆ ಆಕ್ರಮಿಸುತ್ತವೆ. ತಾವು ನಿರ್ಮಿಸಿದ ಜಾಲದಲ್ಲಿ ಬೇಟೆಯು ಪತ್ತೆಯಾದಾಗ ಮಾರನಾಂತಿಕ ಕಡಿತವನ್ನು ಉಂಟುಮಾಡಿ ರೇಷ್ಮೆಯಂತಹ  ಬೇಟೆಯನ್ನು ತ್ವರಿತವಾಗಿ ಸುತ್ತುತ್ತವೆ. ಆ ಬೇಟೆಯನ್ನು ತಕ್ಷಣವೇ ತಿನ್ನಬಹುದು ಅಥವ ಸಂಗ್ರಹಿಸಲೂಬಹುದು. ಬೇಟೆಯನ್ನು ಜಾಲದಿಂದ ತೆಗೆದು ಮತ್ತೆ ಹೊಸದಾಗಿ ಜಾಲವನ್ನು ನಿರ್ಮಿಸುತ್ತದೆ.

©ಹಯಾತ್ ಮೊಹಮ್ಮದ್, ಏಡಿಜೇಡ   

ಏಡಿ ಜೇಡ ಎಂಬ ಸಾಮಾನ್ಯ ಹೆಸರು ಈ ಕುಟುಂಬದಲ್ಲಿನ ಪ್ರಭೇದಗಳೊಂದಿಗೆ ಹೆಚ್ಚಾಗಿ ಸಂಬಂಧ ಹೊಂದಿದೆ. ಈ ಕುಟುಂಬದ ಅನೇಕ ಏಡಿಗಳನ್ನು ಹೂ ಏಡಿ ಜೇಡಗಳು ಎಂದೂ ಕರೆಯುತ್ತಾರೆ. ಇಂತಹ ಜೇಡಗಳು ಏಡಿಗಳಿಗೆ ಹೋಲುವ ಕಾರಣ, ಅಂತಹ ಜೇಡಗಳು ತಮ್ಮ ಎರಡು ಮುಂಭಾಗದ ಜೋಡಿ ಕಾಲುಗಳನ್ನು ಹಿಡಿದಿಟ್ಟುಕೊಳ್ಳುವ ರೀತಿ ಮತ್ತು ಪಕ್ಕಕ್ಕೆ ಅಥವಾ ಹಿಂದಕ್ಕೆ ಚಲಿಸುವ ಸಾಮರ್ಥ್ಯದಿಂದಾಗಿ ಅವುಗಳನ್ನು “ಏಡಿ ಜೇಡಗಳು” ಎಂದು ಕರೆಯಲಾಗುತ್ತದೆ. ಇವುಗಳು ಹೆಚ್ಚಾಗಿ ಹೂಗಳು/ಹಣ್ಣುಗಳ ಹತ್ತಿರ ಮಕರಂದ ಹೀರಲು/ಹಣ್ಣನ್ನು ತಿನ್ನಲು ಬರುವ ಕೀಟಗಳನ್ನು ಮತ್ತು ಚಿಟ್ಟೆಗಳಂತಹುದನ್ನು ಹಿಡಿಯಲು ಕಾಯುತ್ತಿರುತ್ತವೆ. ಕೆಲವೊಮ್ಮೆ ಎಲೆಗಳ ನಡುವೆ ಹಾಗು ತೆರೆದ ಸ್ಥಳಗಳಲ್ಲಿ ಆಶ್ಚರ್ಯವೆನಿಸುವಂತೆ ಪಕ್ಷಿಯ ಹಿಕ್ಕೆಯನ್ನು ಅನುಕರಿಸುತ್ತವೆ. ಎಲ್ಲಾ ಸಂದರ್ಭದಲ್ಲೂ, ಏಡಿ ಜೇಡಗಳು ತಮ್ಮ ಶಕ್ತಿಯುತ ಮುಂಭಾಗದ ಕಾಲುಗಳನ್ನು ಬಳಸಿ ಬೇಟೆಯಾಡುತ್ತವೆ.

ಚಿತ್ರಗಳು:ಹಯಾತ್ ಮೊಹಮ್ಮದ್
ವಿವರಣೆ: ಧನರಾಜ್ ಎಂ

Print Friendly, PDF & Email
Spread the love
error: Content is protected.