ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

                    © ಶ್ರೀನಿವಾಸ್ ಕೆ. ಎಸ್, ಹುಲಿ ಮತ್ತು ಅದರ ಮರಿ

ಆ ಮುಖದಲ್ಲಿ ಕ್ರೌರ್ಯತೆಗಿಂತಲೂ ಹೆಚ್ಚಾಗಿ ಒಂದು ರೀತಿಯ ಗಾಂಭೀರ್ಯ. ಸೂಜಿಯ ಮೊನಚನ್ನೂ ಮೀರಿಸುವ ತೀಕ್ಷ್ಣ ನೋಟ, ಲಲನೆಯರನ್ನೂ ನಾಚಿಸುವ ಗಜಗಾಂಭೀರ್ಯ ನಡಿಗೆ, ದೇಹದ ತುಂಬೆಲ್ಲ ರಂಗೋಲಿಗೂ ಸ್ಪರ್ಧೆ ಒಡ್ಡುವಂಥ ಪಟ್ಟೆ ಪಟ್ಟೆ ಚಿತ್ರ. ಕಣ್ಣಿಗೆ ಬಿದ್ದ ಶಿಕಾರಿಯನ್ನು ಪಟ್ಟುಹಿಡಿದು ಬೆನ್ನತ್ತಿ, ತಿಂದು ತೇಗಿಯೇ ಬರುವ ಖರಾರುವಾಕ್ ಗುರಿ, ಬೇಟೆ ಸಿಕ್ಕು, ಹೊಟ್ಟೆ ತುಂಬಿದ ಮೇಲೆ ಕ್ರೌರ್ಯತೆಗೂ, ತನಗೂ ಸಂಬಂಧವೇ ಇಲ್ಲ ಎಂಬಂತೆ ಆಕಳಿಸಿ ಮಲಗುವ ನಿರುಪದ್ರವಿ ಜೀವಿ! ಹೌದು, ಇದು ಭಾರತದ ರಾಷ್ಟ್ರಪ್ರಾಣಿ ಹುಲಿ. ಪ್ಯಾಂಥೆರಾ ಟೈಗ್ರಿಸ್ ಎಂಬ ವೈಜ್ಞಾನಿಕ ಹೆಸರು ಪಡೆದ ಹುಲಿ ಪ್ರಾಣಿಶಾಸ್ತ್ರದ ಪ್ರಕಾರ ಫೆಲಿಡೇ ಎಂಬ ಕುಟುಂಬಕ್ಕೆ ಸೇರಿದ ಜೀವಿ. 13 ಅಡಿ ಉದ್ದ ಹಾಗು 300 ಕೆಜಿವರೆಗೂ ತೂಗಬಹುದು. ಹುಲಿಗಳ ಆಯಸ್ಸು ಕಾಡಿನಲ್ಲಿ 10 ರಿಂದ 15 ವರ್ಷಗಳು, ಸೆರೆಯಲ್ಲಿ  16 ರಿಂದ 18 ವರ್ಷಗಳು.

© ಶ್ರೀನಿವಾಸ್ ಕೆ. ಎಸ್, ಹದ್ದು-ಗೂಬೆ

ಭಾರತೀಯ ಹದ್ದು-ಗೂಬೆ ಎಂಬುದು ಭಾರತೀಯ ಉಪಖಂಡದಲ್ಲಿ ಕಂಡುಬರುವ ದೊಡ್ಡ ಕೊಂಬಿನ ಗೂಬೆಯ ಒಂದು ಜಾತಿಯಾಗಿದೆ. ಈ ಮೊದಲು ಇದನ್ನು ಯುರೇಷಿಯನ್ ಹದ್ದು-ಗೂಬೆಯ ಉಪಜಾತಿಯಾಗಿ ಪರಿಗಣಿಸಲಾಗುತ್ತಿತ್ತು. ಇವು ಗುಡ್ಡಗಾಡು ಮತ್ತು ಕಲ್ಲಿನ ಪೊದೆಗಳ ಕಾಡುಗಳಲ್ಲಿ ಕಂಡುಬರುತ್ತವೆ ಮತ್ತು ಸಾಮಾನ್ಯವಾಗಿ ಜೋಡಿಯಾಗಿ ಕಂಡುಬರುತ್ತವೆ. ಇವುಗಳು ಇಲಿ ಮೊಲದಂತಹ ಸಣ್ಣ ಪ್ರಾಣಿಗಳನ್ನು ತಿಂದು ಬದುಕುತ್ತವೆ ಕೆಲವೊಮ್ಮೆ ಮರಕುಟಿಗ, ಬಕಪಕ್ಷಿಯಂತಹ ಹಕ್ಕಿಗಳನ್ನು ತಿನ್ನುತ್ತವೆ. ಇವು ಸಾಮಾನ್ಯವಾಗಿ 20 ವರ್ಷ ಬದುಕುತ್ತವೆ.

                  © ಶ್ರೀನಿವಾಸ್ ಕೆ. ಎಸ್, ಕಪ್ಪು ಚುಕ್ಕಿಚಿಟ್ಟೆ  

ಕಂಬಳಿ ಹುಳುವಾಗಿ ಕೋಶಾವಸ್ಥೆಗೆ ಹೋಗುವ ಜೀವಿ, ಆಕರ್ಷಕ ಚಿಟ್ಟೆಯಾಗಿ  ಹೇಗೆ ಪರಿವರ್ತನೆಗೊಳ್ಳುತ್ತದೆ  ಎಂಬುದು  ಯಾರಿಗೂ ತಿಳಿಯದ  ಪ್ರಕೃತಿಯ ನಿಗೂಢ, ನಮ್ಮ ಕಣ್ ಮುಂದೆಯೇ ನಡೆಯುತ್ತಿರುವ ಈ ಕ್ರಿಯೆಗೆ ಉತ್ತರ ಇರದ ನಮ್ಮಲ್ಲಿ ಇಂತಹ ಅಗೋಚರ ಆಶ್ಚರ್ಯಕರ ಸತ್ಯಗಳು ನಿಸರ್ಗದ  ಮಡಿಲಲ್ಲಿ ಎಷ್ಟು ಅಡಗಿವೆಯೋ? ಬಲ್ಲವರಾರು. ಆ ಚಿಟ್ಟೆಗಳಲ್ಲಿ ಒಂದಾದ ಕಪ್ಪು ಚುಕ್ಕಿ  ಹೆಸರಿನ  ಈ ಚಿಟ್ಟೆಯು ಆಕೃತಿಯಲ್ಲಿ ಚಿಕ್ಕದಾಗಿದ್ದು ತನ್ನ ಕಪ್ಪು-ಬಿಳುಪು ವಿನ್ಯಾಸದಿಂದ ಎಲ್ಲರ ಮನಸೆಳೆಯುತ್ತದೆ.

© ಶ್ರೀನಿವಾಸ್ ಕೆ. ಎಸ್, ನೀಲಿ ಪಟ್ಟೆಯ ನೊಣ

ನೀಲಿ ಪಟ್ಟೆಯ ನೊಣಗಳು ಹೆಸರೇ ಹೇಳುವಂತೆ ದೇಹದ ಮೇಲೆ ನೀಲಿ ಪಟ್ಟೆಗಳನ್ನು ಹೊಂದಿದೆ. ಇದು ಪರಾಗಸ್ಪರ್ಶದಲ್ಲಿ ಅತ್ಯಮೂಲ್ಯ ಪಾತ್ರವನ್ನು ವಹಿಸುತ್ತದೆ. ನಾವು ತಿನ್ನುತ್ತಿರುವ ಊಟ, ಹಣ್ಣು, ಈ ನೀಲಿ ಪಟ್ಟೆಯ  ಇನ್ನು ಹಲವಾರು ವಿವಿಧ ಪ್ರಭೇದದ ನೊಣಗಳಿಂದಲೇ ಎಂದರೆ ಖಂಡಿತ ತಪ್ಪಾಗಲಾರದು.

ಚಿತ್ರಗಳು: ಶ್ರೀನಿವಾಸ್ ಕೆ. ಎಸ್
ವಿವರಣೆ: ವಿವೇಕ. ಎಸ್

Print Friendly, PDF & Email
Spread the love
error: Content is protected.