ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

© ವಿನೋದ್ ಕೆ ಪಿ, ನೀಲಿ ಮುಖದ ಮಲ್ಕೋಹ

ಪೊದೆಗಳು ಮತ್ತು ಕುರುಚಲು ಕಾಡುಗಳ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುವ ಈ ಪಕ್ಷಿಯೂ ಹಠಾತ್ತಾಗಿ ಕೋಗಿಲೆಯಂತಿದ್ದರೂ, ಸೂಕ್ಷ್ಮವಾಗಿ ಗಮನಿಸಿದಾಗ ಕಾಣಸಿಗುವ ವರ್ಣಗಳು ಅಸಲೀ ಹೆಸರನ್ನು ತಿಳಿಸುತ್ತದೆ. ದೇಹವು ನೀಲಿ ಮತ್ತು ಕಪ್ಪು ಮಿಶ್ರವಾಗಿದ್ದು , ಬಾಲದ ಅಂಚಿನಲ್ಲಿ ಬಿಳಿ ಪಟ್ಟೆಗಳೊಂದಿಗೆ ತನ್ನ ಕಣ್ಣುಗಳ ನೀಲಿ ಉಂಗುರದಿಂದ ಆಕರ್ಷಿತವಾಗಿ ಕಾಣುವ ಇದುವೇ ನೀಲಿ ಮುಖದ ಮಲ್ಕೋಹ (Blue Faced Malkoha). ಮುಳ್ಳಿನ ಪೊದೆಯಲ್ಲಿ ಹಸಿರು ಎಲೆಗಳ ಕೊಂಬೆಗಳೊಂದಿಗೆ ಮುಚ್ಚಿರುವಹಾಗೆ ಗೂಡು ಕಟ್ಟುವ ಇವುಗಳು ಎರಡು ಮೊಟ್ಟೆಗಳನ್ನು, ವಿರಳವಾಗಿ ಮೂರು ಸಕ್ಕರೆ ಬಿಳಿಯಂತಹ ಮೊಟ್ಟೆಯನ್ನಿಡುತ್ತವೆ. ಇವುಗಳ ಸಂತಾನೋತ್ಪತ್ತಿ ಋತುವು ವಿಸ್ತರಿಸಲ್ಪಟ್ಟಿದ್ದು ಮಾರ್ಚ್ ನಿಂದ ಆಗಸ್ಟಿನುದ್ದಕ್ಕೂ ಸಂತಾನೋತ್ಪತ್ತಿ ನಡೆಸುತ್ತವೆ.

© ವಿನೋದ್ ಕೆ ಪಿ, ಹಾಲಕ್ಕಿ

ಹಾಲಕ್ಕಿಯು ಗೂಬೆ ಪ್ರಭೇದಗಳಲ್ಲಿ ಸಣ್ಣದಾಗಿದ್ದು ಗೊರವಂಕದ ಗಾತ್ರದ್ದಾಗಿರುತ್ತದೆ. ಭಾರತ ಸೇರಿದಂತೆ ಆಗ್ನೇಯ ಏಷ್ಯಾದ ಕೃಷಿ ಭೂಮಿ, ಬಂಡೆಗಳು ಅಥವ ಕಟ್ಟಡಗಳು ಹಾಗು ಮರದ ಪೊಟರೆಗಳಲ್ಲಿ ಮೂರರಿಂದ ಐದು ಬಿಳೀ ಮೊಟ್ಟೆಯನ್ನಿಟ್ಟು ೨೮-೩೩ ದಿನಗಳವರೆಗೆ ಕಾವು ಕೊಡುವುದರ ಮೂಲಕ ತನ್ನ ಸಂತಾನೊತ್ಪತ್ತಿಯ ಋತುವನ್ನು ಕಳೆಯುತ್ತವೆ. ಹೆಚ್ಚಾಗಿ ರಾತ್ರಿಯಲ್ಲಿ ಚಲನೆಯಲ್ಲಿರುವ ಇವುಗಳು ನಿಶಾಚರಿಗಳು. ಆಗಾಗ ಹಗಲಲ್ಲು ಇವುಗಳ ಚಟುವಟಿಕೆಯನ್ನು ಗಮನಿಸಬಹುದು. ಸಣ್ಣಪುಟ್ಟ ಕೀಟಗಳು , ಕಪ್ಪೆ , ಸಣ್ಣ ಗಾತ್ರದ ಹಾವುಗಳು ಹಾಗು ಇನ್ನಿತರ ಕಶೇರುಕಗಳನ್ನು ಬೇಟೆಯಾಡುವುದರ ಮೂಲಕ ರೈತ ಮಿತ್ರನಾಗಿದೆ.ತನ್ನ ಕೂಗಿನಿಂದ ಮಾನವನಿಗೆ ಹೆಚ್ಚು ಪರಿಚಿತವಾಗಿದ್ದು ಹಲವರು ಚುಕ್ಕೆ  ಗೂಬೆ , ಹಾಲ್ಗೂಬೆ , ಗೂಗ ಹಾಗು ಇನ್ನಿತರ ಹೆಸರುಗಳಿಂದ ಗುರುತಿಸಲ್ಪಟ್ಟಿದೆ.

© ವಿನೋದ್ ಕೆ ಪಿ , ಫ್ಲೇಮ್ ತ್ರೊಟೆಡ್ ಬುಲ್ಬುಲ್

ಪಿಕಳಾರ ಸಂತತಿಯ ಸದಸ್ಯ ಆಗಿರುವ ಈ ಫ್ಲೇಮ್ ತ್ರೊಟೆಡ್ ಬುಲ್ಬುಲ್ ಪಕ್ಷಿಯು ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುತ್ತದೆ. ಹಳದಿ ಮೈ ಬಣ್ಣ , ಕಿತ್ತಳೆ ಮತ್ತು ಕೆಂಪು ಮಿಶ್ರಿತ ಗಂಟಲಿನೊಂದಿಗೆ ಕಪ್ಪು ತಲೆಯನ್ನು ಹೊಂದಿದೆ. ಹಿಂದೆ ಇವುಗಳನ್ನು ರೂಬಿ ಥ್ರೋಟೆಡ್ ಬುಲ್ಬುಲ್ ಮತ್ತು ಕಪ್ಪು ತಲೆಯ  ಬುಲ್ಬುಲ್ ನಂತಹ ಹೆಸರುಗಳಿಂದ ಕರೆಯುತಿದ್ದರು. ಇದರ ಸಂತಾನೋತ್ಪತ್ತಿ ಕಾಲವು ಫೆಬ್ರವರಿ ಇಂದ ಏಪ್ರಿಲ್ ವರೆಗೆ ಇದ್ದು ನೆಲಮಟ್ಟದಿಂದ 2-3 ಅಡಿ ಎತ್ತರದಲ್ಲಿ ಹಳದಿ ಎಲೆಗಳಿಂದ ಗೂಡು ಕಟ್ಟಿ ಮೊಟ್ಟೆಗಳನ್ನಿಡುತ್ತವೆ. ಇದರ ಧ್ವನಿಯು ಕೆಮ್ಮೀಸೆ ಪಿಕಳಾರವನ್ನು ಹೋಲುತಿದ್ದು ತನ್ನ ಆಹಾರವಾದ ಹಣ್ಣು ಮತ್ತು ಕೀಟಗಳಿಗಾಗಿ ಅರಣ್ಯದ ಸುತ್ತಮುತ್ತಲಿನ ಲಾಂಟಾನಗಳಂತಹ ಗಿಡಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ..

ಚಿತ್ರಗಳು: ವಿನೋದ್ ಕೆ ಪಿ
ವಿವರಣೆ: ಧನರಾಜ್ ಎಂ

Print Friendly, PDF & Email
Spread the love
error: Content is protected.