ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

©ಪೃಥ್ವಿ .ಬಿ,   ಹಾಲಕ್ಕಿ 

ದಕ್ಷಿಣ ಏಷ್ಯಾದ ದೇಶಗಳಲ್ಲಿ ಕಂಡುಬರುವ ಗೂಬೆ ಜಾತಿಗೆ ಸೇರಿದ ಹಕ್ಕಿ ಈ ಹಾಲಕ್ಕಿ. ಸಂಜೆಯ ವೇಳೆ ಮರದ ಮೇಲೆ ಅಥವ ಪಾಳುಮನೆಯ ಸಂದುಗಳಲ್ಲಿ ಕುಳಿತು ಟುಕು ಟುಕು ಎಂದು ಕೂಗುತ್ತವೆ. ಸಾಮಾನ್ಯವಾಗಿ ನಾಲ್ಕೈದು ಹಾಲಕ್ಕಿಗಳು ಕುಟುಂಬ ಸಮೇತ ಕಾಣಸಿಗುತ್ತವೆ. ರಾತ್ರಿಯಿಡಿ ಕಿಚಿ ಕಿಚಿ ಎಂದು ಸಂಭಾಷಿಸುತ್ತಾ ಇರುತ್ತವೆ. ಹಳ್ಳಿಗಳ ಬಳಿ ರಾತ್ರಿವೇಳೆ ಚಿಕ್ಕ ಚಿಕ್ಕ ಇಲಿ ಕಪ್ಪೆಗಳನ್ನು ಹಿಡಿದು ತಿನ್ನುತ್ತವೆ. ಲೈಟುಕಂಬದ ದೀಪದ ಬೆಳಕಿಗೆ ಬರುವ ಉರುಗಗಳನ್ನು ಹಿಡಿದು ತಿನ್ನಲು ಕಂಬದ ತಂತಿಯ ಮೇಲೆ ಕುಳಿತಿರುವುದನ್ನು ಕಾಣಬಹುದು, ಮುಖದ ಮೇಲೆ ಉಬ್ಬಾದ ಹಳದಿ ಕಣ್ಣುಗಳು ಹೊಟ್ಟೆಯ ಮೇಲೆ ಬಿಳಿಚುಕ್ಕೆಗಳಿರುತ್ತವೆ. ದುಂಡನೆಯ ತಲೆ ತಿರುಗಿಸುತ್ತಾ ನೋಡುತ್ತಿರುತ್ತದೆ. ಮರದ ಪೊಟರೆಯಲ್ಲಿ ಗೂಡು ಮಾಡುತ್ತದೆ.  

                                                                      ©ಪೃಥ್ವಿ .ಬಿ, ಗೀಜಗ  

ಕೆರೆಯ ಬಳಿ ನೀರು ಹರಿಯುವ ಹಳದಿ ಇಕ್ಕೆಲಗಳಲ್ಲಿ ನೀರಿನೆಡೆಗೆ ಬಾಗಿರುವ ಮರಗಳಲ್ಲಿ ಬಾವಿಯ ಬಳಿ ಬಿಟ್ಟಿರುವ ಮರದ ಕೊಂಬೆಗಳಲ್ಲಿ ಹುಲ್ಲಿನ ನಾರಿನಿಂದ ಮಾಡಿದ ಕಾಲು ಚೀಲದಾಕಾರದ ಗೂಡನ್ನು ನೀವು ನೋಡಿರುತ್ತೀರಿ. ಒಂದು ಮೊಳ ಉದ್ದದ ಈ ಗೂಡನ್ನು ಕಟ್ಟುವುದು ಗಂಡು. ಗೀಜಗ ಈ ಗೂಡನ್ನು ನೋಡಿ ಗೂಡು ಕಟ್ಟಿದ ಗಂಡನ್ನು ಮೆಚ್ಚಿದೊಡೆ ಮಿಲನವಾಗಿ ಸಂಸಾರ ಶುರು. ಹೆಣ್ಣು ಹಕ್ಕಿ ಮೊಟ್ಟೆ ಇಟ್ಟೊಡನೆ ಗಂಡು ಗೀಜಗ ಇನ್ನೊಂದು ಹಕ್ಕಿಯನ್ನು ಸೆಳೆಯಲು ಬೇರೆ ಗೂಡಿನ ತಯಾರಿ ಶುರುಮಾಡಿಕೊಳ್ಳುತ್ತದೆ. ಸಾಮಾನ್ಯವಾಗಿ ಹಳದಿ ಬಣ್ಣದಿಂದ ಕೂಡಿದ ಈ ಹಕ್ಕಿಯ ತಲೆ ಎದೆ ಹೊಟ್ಟೆಯ ಭಾಗ ಹೊಳೆಯುವ ಹಳದಿ ಬಣ್ಣಕ್ಕಿರುತ್ತದೆ. ಗದ್ದೆಗಳಲ್ಲಿ ಉದುರಿದ ಕಾಳುಗಳನ್ನು ತಿನ್ನುತ್ತೆ. ಹಾರುವ ಗುಂಪು ಗುಂಪು ಗೀಜಗಗಳನ್ನು ಕಾಣಬಹುದು. ಚಿರಿ ಚಿರಿ ಚಿರಿ ಎಂದು ಕೂಗುತ್ತಾ ರಾತ್ರಿ ವೇಳೆ ಒಂದೇಮರದಲ್ಲಿ ಒಟ್ಟಾಗಿ ಕುಳಿತು ನಿದ್ದೆ ಮಾಡುತ್ತವೆ. ಕೊಕ್ಕು ಗುಬ್ಬಚ್ಚಿಗಿದ್ದಂತೆ ಬಲಿಷ್ಠವಾಗಿದೆ. ಇದು ದಕ್ಷಿಣ ಏಷ್ಯಾದ್ಯಂತ ಕಾಣಸಿಗುತ್ತವೆ.

©ಪೃಥ್ವಿ .ಬಿ, ಕೆಂಪು ರಾಟವಾಳ

ಸೂರಕ್ಕಿ ಗಾತ್ರದ ಈ ಹಕ್ಕಿ ಬಯಲು ಪ್ರದೇಶದಲ್ಲಿ ಹುಲ್ಲುಗಾವಲಿನಲ್ಲಿ ನೀರಿರುವ ತಾಣಗಳಲ್ಲಿ ಕಂಡುಬರುತ್ತದೆ. ಕೆಂಡದಂತೆ ಹೊಳೆಯುವ ಬಣ್ಣವುಳ್ಳ ಪುಕ್ಕದಿಂದ ಕಂಗೊಳಿಸುವ ಗಂಡುಹಕ್ಕಿ ದೆಸೆಯಿಂದ ಇದನ್ನು ಹಿಡಿದು ಪಂಜರದೊಳಗಿಟ್ಟು ಸಾಕುತ್ತಾರೆ. ಏಷ್ಯಾದ ದಕ್ಷಿಣ ಭಾಗದಲ್ಲಿ ಕಾಣಸಿಗುತ್ತದೆ. ಕೆಂಪು ಕೊಕ್ಕುಳ್ಳ ಕೆಂಪು ಮುನಿಯನ ಬೂದ ಪುಕ್ಕ ದುಂಡಗೆ ಇದೆ. ಕೆಂಪುಹೊಟ್ಟೆಯ ಮೇಲೆ ಬಿಳಿ ಚುಕ್ಕೆಗಳಿವೆ. ಗುಂಪುಗಳಲ್ಲೇ ಕಾಣಸಿಗುವ ಈ ಮುನಿಯಾಗಳು ಜೋರಾಗಿ ರೆಕ್ಕೆ ಬಡಿಯುತ್ತಾ ಹಾರುತ್ತವೆ. ಹಾರುತ್ತಲೇ ಪಿಪ್ ಪಿಪ್ ಎಂದು ಒಮ್ಮೆ ಹಾಡುತ್ತವೆ. ಹುಲ್ಲಿನ ಬೀಜ ಮಣ್ಣು ಸಣ್ಣ ಸಣ್ಣ ಗೆದ್ದಲು ಕೀಟಗಳೇ ಇವುಗಳ ಆಹಾರ. ಹುಲ್ಲಿನಿಂದ ಬಟ್ಟಲಿನಾಕಾರಕ್ಕೆ ಕಟ್ಟಿದ ಚಿಕ್ಕ ಗೂಡಿನಲ್ಲಿ 2-3 ಮೊಟ್ಟೆಗಳನ್ನಿಟ್ಟು ಗಂಡು ಹೆಣ್ಣು ಎರಡು ಹಕ್ಕಿಗಳು ಮರಿಗಳನ್ನು ಸಾಕಿ ಬೆಳೆಸುತ್ತವೆ.

                                                                              ©ಪೃಥ್ವಿ .ಬಿ,  ಹೆಜ್ಜಾರ್ಲೆ      

ಕೊಕ್ಕಿನ ಮೇಲೆ ಚುಕ್ಕಿಗಳುಳ್ಳ ಈ ದೊಡ್ಡ ಹಕ್ಕಿಯ ಬಣ್ಣ ಬೂದು. ಇದು ಸಾಮಾನ್ಯವಾಗಿ 8-10 ಕೆಜಿ ತೂಕವಿದ್ದು, ದೊಡ್ಡ ಕೊಕ್ಕಿದೆ. ದಕ್ಷಿಣ ಏಷ್ಯಾದೇಶದಲ್ಲಿ ಇವು ಮರಿಮಾಡುತ್ತವೆ, ಸಮುದ್ರ ತೀರಗಳಲ್ಲಿ ಇವನ್ನು ಕಾಣಬಹುದು. ಗುಂಪಾಗಿ ಹಾರುವ ಈ ಹಕ್ಕಿ ಗೂಡುಗಳನ್ನು ಸಹ ಗುಂಪಾಗಿ ಒಂದೇ ಜಾಗದಲ್ಲಿ ಕಟ್ಟುತ್ತದೆ. ಮಾನವನ ಅತಿಕ್ರಮಣದಿಂದ ವಾಸಸ್ಥಳಗಳು ಕ್ಷೀಣಿಸುತ್ತಿವೆ. ಇವುಗಳ ಸಂಖ್ಯೆಯು ಸಹ ಕಡಿಮೆಯಾಗುತ್ತಿದೆ. ನೀರಿನ ಮೇಲೆ ಈಜುವ ಈ ಹಕ್ಕಿ ತನ್ನ ದೊಡ್ಡ ಕೊಕ್ಕಿನಿಂದ ಮೀನುಗಳನ್ನು ಹಿಡಿದು ಗುಳುಂ ಮಾಡುತ್ತದೆ.

ಚಿತ್ರಗಳು: ಪೃಥ್ವಿ .ಬಿ, ಮೈಸೂರು
ವಿವರಣೆ: ಶಂಕರಪ್ಪ .ಕೆ .ಪಿ

Print Friendly, PDF & Email
Spread the love
error: Content is protected.