ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

            ಬೂದು ಕಾಗೆ                                                                                                   ©  ರಘು ಕುಮಾರ್ ಸಿ.

ದಕ್ಷಿಣ ಏಷ್ಯಾ ಖಂಡದ ವಿವಿಧ ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿ ಕಂಡು ಬರುವ ಈ ಕಾಗೆಯು ಕಾರ್ವಿಡೆ (Corvidae) ಕುಟುಂಬಕ್ಕೆ ಸೇರುತ್ತದೆ‌. ಇದನ್ನು ವೈಜ್ಞಾನಿಕವಾಗಿ ಕಾರ್ವಸ್ ಸ್ಪ್ಲೆಂಡೆನ್ಸ್ (Corvus splendens) ಎಂದು ಕರೆಯಲಾಗುತ್ತದೆ. ಮೈ ಬಣ್ಣವು ಕಪ್ಪಾಗಿದ್ದು, ಉದ್ದನೆಯ ಕೊಕ್ಕು ಹಾಗೂ ಬೂದು ಬಣ್ಣದ ಕತ್ತನ್ನು ಹೊಂದಿದೆ. ಹಲ್ಲಿ, ಕಪ್ಪೆ, ಕೀಟಗಳು, ಮೊಟ್ಟೆ, ಸಣ್ಣ ಸಸ್ತನಿಗಳು ಹಾಗೂ ಮಾನವರು ವಾಸಿಸುವ ಸ್ಥಳಗಳಲ್ಲಿ ಸಿಗುವ ಕಸವನ್ನು ತಮ್ಮ ಆಹಾರವಾಗಿ ಸೇವಿಸುತ್ತವೆ. ಇದುಕಡ್ಡಿಗಳಿಂದ ಕೂಡಿದ ವೃತ್ತಾಕಾರದ ಗೂಡನ್ನು ಮರದ ಮೇಲೆ ಕಟ್ಟುತ್ತದೆ.

ಕಪ್ಪು ಕಾಗೆ                                                                                             ©  ರಘು ಕುಮಾರ್ ಸಿ.                     

ಏಷ್ಯಾದ ಉದ್ಯಾನವನ ಹಾಗೂ ಕಾಡು ಪ್ರದೇಶಗಳಲ್ಲಿ ಕಂಡುಬರುವ ಈ ಕಾಗೆಯು ಕಾರ್ವಿಡೆ (Corvidae) ಕುಟುಂಬಕ್ಕೆ ಸೇರುತ್ತದೆ‌. ಇದನ್ನು ವೈಜ್ಞಾನಿಕವಾಗಿ ಕೊರ್ವಸ್ ಮ್ಯಾಕ್ರೋರಿಂಚೋಸ್ (Corvus macrorhynchos) ಎಂದು ಕರೆಯಲಾಗುತ್ತದೆ. ಬೂದು ಕಾಗೆಗಿಂತ ಗಾತ್ರದಲ್ಲಿ ದೊಡ್ಡದಾಗಿದ್ದು, ತಲೆ, ಕುತ್ತಿಗೆ, ಭುಜ ಮತ್ತು ದೇಹದ ಹಿಂಭಾಗವು ಗಾಢ ಬೂದು ಬಣ್ಣದ ಗರಿಗಳನ್ನು ಹೊಂದಿರುತ್ತವೆ. ರೆಕ್ಕೆ, ಬಾಲ, ಮುಖ ಮತ್ತು ಗಂಟಲು ಹೊಳೆಯುವ ಕಪ್ಪು ಬಣ್ಣದ್ದಾಗಿರುತ್ತವೆ. ನೆಲ ಮತ್ತು ಮರದ ಮೇಲೆ ಸಿಗುವ ಜೀವಂತ ಅಥವಾ ಸತ್ತ ಪ್ರಾಣಿಗಳನ್ನು ತಮ್ಮ ಆಹಾರವಾಗಿ ಸೇವಿಸುತ್ತವೆ. ಇದುಕಡ್ಡಿಗಳಿಂದ ಕೂಡಿದ ವೃತ್ತಾಕಾರದ ಗೂಡನ್ನು ಮರದ ಮೇಲೆ ಕಟ್ಟುತ್ತದೆ.

                              
ಗೊರವಂಕ                                                                             ©  ರಘು ಕುಮಾರ್ ಸಿ.

ಏಷ್ಯಾದ ಕಾಡು, ತೋಟ ಹಾಗೂ ಮಾನವರು ವಾಸಿಸುವ ಸ್ಥಳಗಳಲ್ಲಿ ಕಂಡುಬರುವ ಗೊರವಂಕ ಹಕ್ಕಿಯು ಸ್ಟರ್ನಿಡೇ (Sturnidae) ಕುಟುಂಬಕ್ಕೆ ಸೇರುತ್ತದೆ‌. ಇದನ್ನು ವೈಜ್ಞಾನಿಕವಾಗಿ ಅಕ್ರಿಡೋಥೆರೆಸ್ ಟ್ರಿಸ್ಟಿಸ್ (Acridotheres tristis) ಎಂದು ಕರೆಯಲಾಗುತ್ತದೆ. ದೇಹ ಕಂದು ಬಣ್ಣವಿದ್ದು, ಕಪ್ಪು ತಲೆಯನ್ನು ಹೊಂದಿರುತ್ತದೆ. ಕೊಕ್ಕು, ಕಾಲುಗಳು ಮತ್ತು ಕಣ್ಣಿನ ಹಿಂದಿನ ತೇಪೆಯು ಹಳದಿ ಬಣ್ಣದ್ದಾಗಿರುತ್ತದೆ. ತಳಭಾಗದ ರೆಕ್ಕೆಯ‌ ಒಳಪದರವು ಬಿಳಿಯಾಗಿರುತ್ತದೆ. ಸಂಜೆ ಗೂಡಿಗೆ ತೆರಳುವ ಮುನ್ನ ಒಕ್ಕೊರಲಿನಿಂದ ಈ ಪಕ್ಷಿಗಳು ಕೂಗುತ್ತವೆ. ಕೀಟಗಳು, ಸರೀಸೃಪಗಳು, ಸಣ್ಣ ಸಸ್ತನಿಗಳು, ಬೀಜಗಳು, ಧಾನ್ಯಗಳು, ಹಣ್ಣುಗಳು ಮತ್ತು ಇತರೆ ತ್ಯಾಜ್ಯವು ಇವುಗಳ ಆಹಾರವಾಗಿವೆ. ಕಡ್ಡಿ, ಬೇರು, ನಾರು ಹಾಗೂ ಕಾಗದದ ಚೂರುಗಳನ್ನು ಸೇರಿಸಿ ಪೊಟರೆ ಅಥವಾ ಕಟ್ಟಡಗಳ ಸಂದುಗಳಲ್ಲಿ ಗೂಡನ್ನು ಕಟ್ಟುತ್ತದೆ.

  ಮಡಿವಾಳ                                                                                                ©  ರಘು ಕುಮಾರ್ ಸಿ.

ದಕ್ಷಿಣ ಏಷ್ಯಾದ ತೆರೆದ ಕಾಡುಗಳಲ್ಲಿ, ತೋಟ ಮತ್ತು ಮಾನವರು ವಾಸಿಸುವ ಸ್ಥಳಗಳಲ್ಲಿ ಕಂಡುಬರುವ ಈ ಮಡಿವಾಳ ಹಕ್ಕಿಯು ಮಸ್ಕಿಕಾಪಿಡೆ (Muscicapidae) ಕುಟುಂಬಕ್ಕೆ ಸೇರುತ್ತದೆ‌. ಇದನ್ನು ವೈಜ್ಞಾನಿಕವಾಗಿ ಕಾಪ್ಸೈಕಸ್ ಸೌಲಾರಿಸ್ (Copsychus saularis) ಎಂದು ಕರೆಯಲಾಗುತ್ತದೆ. ಗಂಡು ಹಕ್ಕಿಯು ಕಪ್ಪು ಮೇಲ್ಭಾಗವನ್ನು ಹೊಂದಿದ್ದು, ದೇಹದ ತಳಭಾಗ, ಭುಜದ ಮೇಲಿನ ಪಟ್ಟಿ ಹಾಗೂ ಬಾಲದ ಕೆಳಭಾಗ ಬಿಳಿಯ ಬಣ್ಣದ್ದಾಗಿರುತ್ತದೆ. ಹೆಣ್ಣು ಹಕ್ಕಿಯು ಬೂದು ಮಿಶ್ರಿತ ಕಪ್ಪು ಬಣ್ಣದಲ್ಲಿದ್ದು, ಕೆಳಭಾಗವು ಬೂದು ಬಿಳಿ ಬಣ್ಣದ್ದಾಗಿರುತ್ತದೆ. ಕೀಟಗಳು ಮತ್ತು ಇತರೆ ಅಕಶೇರುಕಗಳು ಇವುಗಳ ಆಹಾರವಾಗಿವೆ. ನೆಲದ ಮೇಲೆ ಜಿಗಿಯುವಾಗ ಬಾಲವನ್ನು ಮೇಲೆ ಕೆಳಗೆ ಆಡಿಸುವುದನ್ನು ಕಾಣಬಹುದಾಗಿದೆ. ಪೊಟರೆ, ಗೋಡೆಯ ಬಿಲ, ಬಿದಿರಿನ ಮೆಳೆಗಳಲ್ಲಿ, ಹುಲ್ಲು ಬೇರುಗಳಿಂದ ಕೂಡಿದ ಆಳವಲ್ಲದ ಬಟ್ಟಲಿನಾಕಾರದ ಗೂಡನ್ನು ಕಟ್ಟುತ್ತದೆ.

ಚಿತ್ರಗಳು : ರಘು ಕುಮಾರ್ ಸಿ
        ಲೇಖನ : ದೀಪ್ತಿ ಎನ್.

Print Friendly, PDF & Email
Spread the love
error: Content is protected.