ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

ಕಾಳಿಂಗ ಸರ್ಪ                                                                  ©  ಗಿರೀಶ್ ಗೌಡ

ಭಾರತದ ಪಶ್ಚಿಮ ಘಟ್ಟಗಳು, ಈಶಾನ್ಯ ಭಾರತ ಮತ್ತು ಅಂಡಮಾನ್ ದ್ವೀಪಗಳಲ್ಲಿ ಕಾಣಸಿಗುವ ಈ ವಿಷಕಾರಿ ಕಾಳಿಂಗ ಸ‌ರ್ಪವು ಎಲಾಪಿಡೇ (Elapidae) ಕುಟುಂಬಕ್ಕೆ ಸೇರುತ್ತದೆ.  ಇದರ ವೈಜ್ಞಾನಿಕ ಹೆಸರು ಓಫಿಯೋಫಾಗಸ್ ಹನ್ನಾ (Ophiophagus hannah). ಮೈಮೇಲಿನ ಹುರುಪೆಗಳು ಮೃದುವಾಗಿದ್ದು, ಕುತ್ತಿಗೆಗಿಂತ ತಲೆಯು ಗಾತ್ರದಲ್ಲಿ ದೊಡ್ಡದಿರುತ್ತದೆ. ದೇಹವು ಕಂದು, ಹಸಿರು, ಕಪ್ಪು, ಹಳದಿ-ಮಿಶ್ರಿತ ಕಂದು ಬಣ್ಣದಲ್ಲಿದ್ದು, ಸಾಮಾನ್ಯವಾಗಿ ಬಿಳಿ ಮತ್ತು ಹಳದಿ ಪಟ್ಟೆಗಳಿರುತ್ತವೆ. ಈ ಸರ್ಪಗಳು ಜೀವಿಸಲು ಹೆಚ್ಚು ಮಳೆ ಬೀಳುವ ಕಾಡುಗಳನ್ನು ಅರಸುತ್ತವೆ. ಹೆಣ್ಣು ಕಾಳಿಂಗಗಳು ಒಣ ಎಲೆಗಳಿಂದ ಗೂಡನ್ನು ನಿರ್ಮಿಸಿ ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ದೊಡ್ಡ ಹಲ್ಲಿಗಳು ಮತ್ತು ಇತರೆ ಹಾವುಗಳು ಇವುಗಳು ಆಹಾರವಾಗಿವೆ. ದೊಡ್ಡ ಗಾತ್ರದ ಜೀವಿಯನ್ನು ಸೇವಿಸಿದ ನಂತರ ಹಲವು ತಿಂಗಳುಗಳ ಕಾಲ ಆಹಾರವಿಲ್ಲದೆ ಜೀವಿಸಬಲ್ಲ ಸಾಮರ್ಥ್ಯವನ್ನು ಇವು ಹೊಂದಿವೆ.

                         ಮಲಬಾರ್ ಗುಳಿಮಂಡಲ ಹಾವು                                                                      ©  ಗಿರೀಶ್ ಗೌಡ

ಭಾರತದ ಪಶ್ಚಿಮ ಘಟ್ಟಗಳು ಮತ್ತು ದಕ್ಷಿಣಕ್ಕೆ ಕನ್ಯಾಕುಮಾರಿಯವರೆಗೆ ಕಾಣಸಿಗುವ ಈ ಮಲಬಾರ್ ಗುಳಿಮಂಡಲ ಹಾವುಗಳು ವೈಪರಿಡೇ (Viperidae) ಕುಟುಂಬಕ್ಕೆ ಸೇರುತ್ತವೆ. ಇವುಗಳನ್ನು ವೈಜ್ಞಾನಿಕವಾಗಿ ಕ್ರಾಸ್ಪಿಡೋಸೆಫಾಲಸ್ ಮಲಬಾರಿಕಸ್ (Craspedocephalus malabaricus) ಎಂದು ಕರೆಯಲಾಗುತ್ತದೆ. ಎತ್ತರದ ಕಾಡುಗಳು, ಗುಹೆಗಳು ಹಾಗೂ ಮರಗಳಲ್ಲಿ ವಾಸಿಸುತ್ತವೆ. ಕೆಲವೊಮ್ಮೆ ತೊರೆಗಳ ಬಳಿ ಇರುವ ಬಂಡೆಗಳು ಹಾಗೂ ಮರಗಳ ಮೇಲೆ ವಿಶ್ರಮಿಸುವುದನ್ನು ಕಾಣಬಹುದಾಗಿದೆ. ಹಸಿರು, ಕಂದು, ಕಪ್ಪು-ಮಿಶ್ರಿತ ಮೈಬಣ್ಣವಿರುವ ಇವುಗಳು ವಿಶಿಷ್ಟವಾದ ಕೀಲ್ಡ್ (Keeled) ಹುರುಪೆಗಳು ಮತ್ತು ತ್ರಿಕೋನಾಕಾರದ ತಲೆಯನ್ನು ಹೊಂದಿವೆ. ಮಳೆಗಾಲದಲ್ಲಿ ಹೆಚ್ಚಾಗಿ ಕಾಣಸಿಗುವ ಈ ಹಾವುಗಳ ಆಹಾರವು ಕಪ್ಪೆಗಳು, ಹಲ್ಲಿಗಳು, ಕೆಲವು ಪಕ್ಷಿಗಳು, ಇಲಿಗಳು ಮತ್ತು ಇತರ ಸಣ್ಣ ಪ್ರಾಣಿಗಳಾಗಿವೆ.

       ಬೆಡ್ಡೋಮಿ ಬೆನ್ನೆಣುಹಾವು                                                   ©  ಗಿರೀಶ್ ಗೌಡ

ಭಾರತದಲ್ಲಿ ಸ್ಥಳೀಯವಾಗಿ ಕಂಡುಬರುವ ಈ ಬೆಡ್ಡೋಮಿ ಬೆನ್ನೆಣು ಹಾವು, ಪಶ್ಚಿಮ ಘಟ್ಟಗಳಿಗೆ ಸೀಮಿತವಾಗಿದೆ. ವಿಷಕಾರಿಯಲ್ಲದ ಇದು, ಕೊಲುಬ್ರಿಡೇ (Colubridae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಹೆಬಿಯಸ್ ಬೆಡ್ಡೋಮಿ (Hebius beddomei) ಎಂದು ಕರೆಯಲಾಗುತ್ತದೆ. ದೇಹವು ಕಡುಗಂದು ಅಥವಾ ಕಪ್ಪು-ಮಿಶ್ರಿತ ಕಂದು ಬಣ್ಣದಲ್ಲಿದ್ದು, ಬಿಳಿ ಮಚ್ಚೆಗಳನ್ನು ಮತ್ತು Keeled ಹುರುಪೆಗಳನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ತೊರೆಗಳ ಬದಿ ವಾಸಿಸುತ್ತಾ ಕಪ್ಪೆಗಳನ್ನು ಆಹಾರವಾಗಿ ಸೇವಿಸುತ್ತದೆ.

ವಾಯ್ನಾಡ್ ಗುರಾಣಿ ಹಾವು                                                                           © ಗಿರೀಶ್ ಗೌಡ

ಭಾರತದ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಈ ವಿಷಕಾರಿಯಲ್ಲದ ವಾಯ್ನಾಡ್ ಗುರಾಣಿ ಹಾವು ಯುರೊಪೆಲ್ಟಿಡೆ (Uropeltidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಮೆಲನೋಫಿಡಿಯಮ್ ವೈನಾಡೆನ್ಸ್ (Melanophidium wynaudense) ಎಂದು ಕರೆಯಲಾಗುತ್ತದೆ. ಮಧ್ಯಮ ಗಾತ್ರದ ಗುರಾಣಿ ಹಾವು/ ಶೀಲ್ಡ್ ಟೇಲ್ ಇದಾಗಿದ್ದು, ಕುತ್ತಿಗೆಯಿಂದ ಬಾಲದವರೆಗೆ ಏಕರೂಪವನ್ನು ಹೊಂದಿರುತ್ತದೆ. ದೇಹದ ಬಣ್ಣವು ನೇರಳೆ ಮಿಶ್ರಿತ ನೀಲಿ ಬಣ್ಣದಲ್ಲಿದ್ದು, ಬಿಳಿ ಮಚ್ಚೆಗಳನ್ನೊಳಗೊಂಡಿರುತ್ತದೆ.

ಚಿತ್ರಗಳು : ಗಿರೀಶ್ ಗೌಡ
        ಲೇಖನ : ದೀಪ್ತಿ ಎನ್.

Print Friendly, PDF & Email
Spread the love
error: Content is protected.