ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

ಚುಕ್ಕಿ ಹರಟೆಮಲ್ಲ ©ದೀಪಕ್ ಎಲ್. ಎಂ.

ಬಾಂಗ್ಲಾದೇಶ, ಬರ್ಮಾ ಮತ್ತು ಭಾರತದ ಹಿಮಾಲಯದಿಂದ ಕೇರಳದವರೆಗೆ ಕಾಣಸಿಗುವ ಈ ಕೆಂಪು ಮಿಶ್ರಿತ ಕಂದು ಬಣ್ಣದ, ಪಿಕಳಾರ ಗಾತ್ರದ ಚುಕ್ಕಿ ಹರಟೆ ಮಲ್ಲ ಹಕ್ಕಿಯು ಪೆಲೋರ್ನಿಡೆ (Pellorneidae) ಕುಟುಂಬಕ್ಕೆ ಸೇರುತ್ತದೆ. ಇದರ ವೈಜ್ಞಾನಿಕ ಹೆಸರು Pellorneum ruficeps ಎಂಬುದಾಗಿದೆ. ಇವು ಸಾಧಾರಣವಾಗಿ ತೆಳ್ಳಗೆ ನೀರು ಹರಿಯುವ ಚಿಕ್ಕ ತೊರೆಗಳು ಅಥವಾ ಕಾಲುವೆಗಳ ಹತ್ತಿರ ಕಾಣುತ್ತವೆ. ಒದ್ದೆ ನೆಲದ ಮೇಲಿನ ತರಗೆಲೆಗಳನ್ನೂ, ಕಸ ಕಡ್ಡಿಗಳನ್ನೂ ಎತ್ತಿ ಹಾಕುತ್ತಾ ಮಣ್ಣು ಹುಳುಗಳನ್ನೂ ಕೀಟಗಳನ್ನೂ ಹುಡುಕುತ್ತವೆ. ಬಹಳ ಸಂಕೋಚ ಸ್ವಭಾವದ ಮತ್ತು ಹೆಚ್ಚು ಮೌನಿಯಾದ ಈ ಹಕ್ಕಿಗಳು ಆಗಾಗ ಕಿಟ್ಟಿ ಟ್ಟೀ ಎಂದು ಮೆಲುದನಿಯಲ್ಲಿ ಸಿಳ್ಳೆ ಹಾಕುತ್ತವೆ. ಮಾರ್ಚ್ ನಿಂದ ಮೇ ತಿಂಗಳ ವರೆಗೆ ಬಿದಿರಿನ ಎಲೆಗಳಿಂದ ನೆಲ ಮಟ್ಟದಲ್ಲಿ ಅಥವಾ ನೆಲದಲ್ಲಿ ದೊಡ್ಡ ಗೋಳಾಕಾರದ ಗೂಡು ಮಾಡಿ ಪ್ರವೇಶಕ್ಕೆ ರಂಧ್ರವನ್ನೂ ಸಹ ಮಾಡುತ್ತವೆ.

              ಕೆಂಪು ಹರಟೆಮಲ್ಲ                                                                         ©  ದೀಪಕ್ ಎಲ್. ಎಂ.

ಭಾರತ, ಬಾಂಗ್ಲಾದೇಶ, ಸಿಲೋನ್, ಬರ್ಮಾ ದೇಶಗಳ ಎತ್ತರದ ಹುಲ್ಲುಗಾವಲುಗಳಲ್ಲಿ ಮತ್ತು ಮುಳ್ಳುಕಂಟಿಗಳಿಂದ ಕೂಡಿದ ಕುರುಚಲು ಕಾಡುಗಳಲ್ಲಿ ಕಂಡುಬರುವ ಈ ಕಂದುಗೆಂಪು ಬಣ್ಣದ ಹಕ್ಕಿಯು ಟಿಮಾಲಿಡೆ (Timaliidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಡುಮೆಟಿಯಾ ಹೈಪರ್ಥ್ರಾ Dumetia hyperythra ಎಂದು ಕರೆಯಲಾಗುತ್ತದೆ. ದಕ್ಷಿಣ ಭಾರತದಲ್ಲಿರುವ ಗಿಜಗಾರಲು ಹಕ್ಕಿಗೆ ಎದೆ ಬೆಳ್ಳಗಿದ್ದು, ಹೊಟ್ಟೆ ಹೊಂಬಣ್ಣದಲ್ಲಿರುತ್ತದೆ. ಗುಂಪುಗಳಲ್ಲಿದ್ದಾಗ ಗಿಜಿಗಿಜಿ ಕ್ರೀಕ್ರೀ ಎಂದು ಸದಾ ಪರಸ್ಪರ ಸಂಭಾಷಿಸುತ್ತಾ ದಟ್ಟ ಪೊದೆಗಳಡಿಯಲ್ಲಿ ಮೇವು ಹುಡುಕುತ್ತವೆ‌.  ಕೊಂಚ ದೂರದಿಂದ ಇವುಗಳ ಸಂಭಾಷಣೆ ಗೆಜ್ಜೆಯ ಸದ್ದಿನಂತೆ ಕೇಳಿಸುತ್ತದೆ. ಗಾಬರಿಯಾದಾಗ ಗಟ್ಟಿಯಾಗಿ ಗಲಾಟೆ ಮಾಡುತ್ತಾ ಎಲ್ಲವೂ ಒಂದೊಂದು ದಿಕ್ಕಿಗೆ ಪರಾರಿಯಾಗುತ್ತವೆ. ಕೀಟಗಳು, ಕಾಡಿನ ಗಿಡಗಳ ಚಿಕ್ಕಪುಟ್ಟ ಹಣ್ಣುಗಳು ಮತ್ತು ಹೂವಿನ ಮಕರಂದ ಇವುಗಳ ಆಹಾರವಾಗಿವೆ. ಬಿದಿರಿನ ಎಲೆ ಮತ್ತು ಹುಲ್ಲು ಸೇರಿಸಿ ಗೋಳಾಕಾರದ ಗೂಡು ಕಟ್ಟುತ್ತದೆ.

ಬಿಳಿ ಹುಬ್ಬಿನ ಪಿಕಳಾರ                                                                ©  ದೀಪಕ್ ಎಲ್. ಎಂ.

ಭಾರತ, ಸಿಲೋನ್, ಬಾಂಗ್ಲಾದೇಶ, ಬರ್ಮಾ ದೇಶಗಳಲ್ಲಿನ ಪರ್ಣಪಾತಿ ಮತ್ತು ಕುರುಚಲು ಕಾಡುಗಳಲ್ಲಿ ಕಾಣಸಿಗುವ ಈ ತೆಳು ಹಳದಿ ಮಿಶ್ರಿತ ಹಸಿರು ಬಣ್ಣದ ಮೈನಾ ಗಾತ್ರದ ಬಿಳಿ ಹುಬ್ಬಿನ ಪಿಕಳಾರ ಹಕ್ಕಿಯು ಪಿಕ್ನೋನೋಟಿಡೇ (Pycnonotidae) ಕುಟುಂಬಕ್ಕೆ ಸೇರುತ್ತದೆ. ಇವುಗಳ ವೈಜ್ಞಾನಿಕ ಹೆಸರು ಪಿಕ್ನೋನೋಟಸ್ ಲ್ಯುಟಿಯೋಲಸ್ Pycnonotus luteolus. ತಲೆಯ ಮೇಲೆ ಕಪ್ಪು ಪುಕ್ಕಗಳ ಚಿಕ್ಕ ಚೊಟ್ಟಿ ಇದ್ದು, ಹೊಟ್ಟೆ ಮತ್ತು ಎದೆ ತೆಳು ಹಳದಿ ಬಣ್ಣದಲ್ಲಿರುತ್ತದೆ ಹಾಗೂ ಹುಬ್ಬಿನ ಮೇಲೆ ಬಿಳಿ ಪಟ್ಟೆ ಇರುತ್ತದೆ. ಸಾಮಾನ್ಯವಾಗಿ ಮೌನಿಯಾದ ಹಕ್ಕಿಯಾದರೂ ಗುಂಪಿನಲ್ಲಿದ್ದಾಗ ನಿರಂತರವಾಗಿ ಕೂಗುತ್ತಾ ಸಂಭಾಷಿಸುತ್ತದೆ. ಕೊಳೆತ ಹಣ್ಣುಗಳು, ಕೀಟಗಳು ಮತ್ತು ಹೂವಿನ ಮಕರಂದ ಇದರ ಆಹಾರವಾಗಿವೆ. ಇದು ಪೊದೆಗಳಲ್ಲಿ ನಾರಿನಿಂದ ನೆಯ್ದ ಗೂಡನ್ನು ಮಾಡುತ್ತದೆ.

ಸಣ್ಣ ಕುಟ್ರ                                                                                  © ದೀಪಕ್ ಎಲ್. ಎಂ.

ದಕ್ಷಿಣ ಭಾರತದ ನಿತ್ಯ ಹರಿದ್ವರ್ಣ, ಅರೆ ನಿತ್ಯಹರಿದ್ವರ್ಣ, ತೇವ ಪರ್ಣಪಾತಿ ಕಾಡು, ತೋಟ ಮತ್ತು ಉದ್ಯಾನವನಗಳಲ್ಲಿ ಕಾಣಸಿಗುವ ಈ ಕುಟ್ರ ಹಕ್ಕಿಯು ಮೆಗಾಲೈಮಿಡೆ (Megalaimidae) ಕುಟುಂಬಕ್ಕೆ ಸೇರುತ್ತದೆ. ಇದರ ವೈಜ್ಞಾನಿಕ ಹೆಸರು ಸೈಲೋಪೋಗಾನ್ ವಿರಿಡಿಸ್ Psilopogon viridis ಎಂಬುದಾಗಿದೆ. ತಲೆ ಮತ್ತು ಕತ್ತು ತಿಳಿ ಕಂದು ಬಣ್ಣದ್ದಾಗಿದ್ದು, ಎದೆ ಮೇಲೆ ಬಿಳಿ ಗೆರೆ ಇರುತ್ತದೆ. ಕೆನ್ನೆ ಹಾಗೂ ಗದ್ದ ಬಿಳಿಯಾಗಿದ್ದು, ಹಸಿರು ರೆಕ್ಕೆ ಹಾಗೂ ಮೋಟು ಬಾಲವಿರುತ್ತದೆ ಮತ್ತು ಕೇಸರಿ ಕೊಕ್ಕಿನ ಸುತ್ತ ಮೀಸೆಯನ್ನು ಹೊಂದಿರುತ್ತದೆ. ಇವುಗಳು ಹಣ್ಣುಗಳನ್ನು ತಮ್ಮ ಆಹಾರವಾಗಿ ಸೇವಿಸಿ, ಬೀಜ ಪ್ರಸರಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಸಾಮಾನ್ಯವಾಗಿ ಹಳೆಯ ಮರದ ಕೊಂಬೆಗಳಲ್ಲಿ ರಂಧ್ರಗಳನ್ನು ಮಾಡಿ ಗೂಡನ್ನು ಕಟ್ಟುತ್ತವೆ ಹಾಗೂ ಮಧ್ಯಾಹ್ನದ ವೇಳೆಯಲ್ಲಿ “ಕುಟ್ರೂಕ್-ಕುಟ್ರೂಕ್-ಕುಟ್ರೂಕ್” ಎಂದು ನಿರಂತರವಾಗಿ ಕೂಗುತ್ತವೆ.

ಚಿತ್ರಗಳು : ದೀಪಕ್ ಎಲ್. ಎಂ.
        ಲೇಖನ : ದೀಪ್ತಿ ಎನ್.

Print Friendly, PDF & Email
Spread the love
error: Content is protected.