ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

      ಹಳದಿ ಪೊದೆಗಪ್ಪೆ                    ©  ಗಿರೀಶ್ ಗೌಡ .  

ಕರ್ನಾಟಕದ ಪಶ್ಚಿಮಘಟ್ಟಗಳ ನಿತ್ಯಹರಿದ್ವರ್ಣ ಕಾಡುಗಳಲ್ಲಿ, ಕಾಫಿ ಮತ್ತು ಟೀ ತೋಟಗಳಲ್ಲಿ ಕಂಡುಬರುವ ಈ ಹಳದಿ ಪೊದೆಗಪ್ಪೆಗಳು ರಾಕೋಫೋರಿಡೆ (Rhacophoridae) ಕುಟುಂಬಕ್ಕೆ ಸೇರುತ್ತವೆ. Yellow bush frog ಎಂದು ಕರೆಯಲ್ಪಡುವ ಈ ಕಪ್ಪೆಗಳ ವೈಜ್ಞಾನಿಕ ಹೆಸರು Raorchestes luteolus ಎಂಬುದಾಗಿದೆ.  ಚೂಪಾದ ಮೂಗು ಹಾಗೂ ನೀಲಿ ಬಣ್ಣದಿಂದ ಸುತ್ತುವರಿದ ಸುವರ್ಣ ಹಳದಿ ಬಣ್ಣದ ಕಣ್ಣುಗಳಿದ್ದು, ಮೈಬಣ್ಣವು ಹಳದಿ ಅಥವಾ ಹಳದಿ ಮಿಶ್ರಿತ ಕಂದು ಬಣ್ಣದ್ದಾಗಿರುತ್ತದೆ. ಕಂದು ಬಣ್ಣದ ಚುಕ್ಕೆಗಳನ್ನು ಮತ್ತು ಮಸುಕಾದ ನಿರಂತರ ರೇಖೆಗಳನ್ನು ಹೊಂದಿರುತ್ತದೆ. ಇವು ಸಾಮಾನ್ಯವಾಗಿ ನೆಲದಿಂದ ಒಂದು ಮೀಟರ್ ಎತ್ತರದಲ್ಲಿರುವ ಪೊದೆಗಳ ಎಲೆ ಅಥವಾ ಕಾಂಡಗಳ ಮೇಲೆ ಕಂಡುಬರುತ್ತವೆ. ಗಂಡು ಕಪ್ಪೆಗಳು ಸಂಜೆಯ ಸಮಯದಲ್ಲಿ ತಮ್ಮ ಕರೆಯನ್ನು, ಉದುರಿದ ಎಲೆಗಳ ಕೆಳಗೆ ಪ್ರಾರಂಭಿಸಿ ನಂತರ ಸಸ್ಯಗಳ ಮೇಲೆ ಏರುತ್ತವೆ

              ಕುದುರೆಮುಖ ಪೊದೆಗಪ್ಪೆ                                                                        ©  ಗಿರೀಶ್ ಗೌಡ

ಕುದುರೆಮುಖ ಪೊದೆಗಪ್ಪೆ  ಎಂದು ಕರೆಯಲ್ಪಡುವ ಈ ಕಪ್ಪೆಗಳು ಕರ್ನಾಟಕದ ಕುದುರೆಮುಖ, ಚಿಕ್ಕಮಗಳೂರು, ಕೊಡಗು ಮತ್ತು ಕೇರಳದ ವಾಯ್ನಾಡಿನ ನಿತ್ಯಹರಿದ್ವರ್ಣ, ಎಲೆ ಉದುರುವ ಕಾಡುಗಳಲ್ಲಿ, ರಸ್ತೆ ಬದಿಯ ಪೊದೆ ಹಾಗೂ ತೋಟಗಳಲ್ಲಿ ಕಂಡುಬರುತ್ತವೆ. Rhacophoridae ಕುಟುಂಬಕ್ಕೆ ಸೇರುವ ಇವುಗಳ ವೈಜ್ಞಾನಿಕ ಹೆಸರು Raorchestes tuberohumerus ಎಂಬುದಾಗಿದೆ. ಮೂತಿಯು ಅಂಡಾಕಾರದಲ್ಲಿದ್ದು, ಕಣ್ಣು ಸುವರ್ಣ ಕಂದು ಬಣ್ಣದ್ದಾಗಿರುತ್ತದೆ. ಬೆನ್ನಿನ ಭಾಗವು ತಿಳಿಗಂದು ಅಥವಾ ಬೂದು ಬಣ್ಣದ್ದಾಗಿದ್ದು, ಚೂಪಾದ ಆಕೃತಿಗಳನ್ನು ಹೊಂದಿರುತ್ತದೆ ಮತ್ತು ತೊಡೆಸಂದುಗಳಲ್ಲಿ ಹಳದಿ ಬಣ್ಣದ ತೇಪೆಗಳನ್ನು ಕಾಣಬಹುದಾಗಿದೆ. ಇವು ಪೊದೆಗಳ ಒಣಗಿದ ಎಲೆಗಳ ಮೇಲೆ ಕೂತು, ನೆಲದ ಕಡೆ ಮುಖ ಮಾಡಿ ಕರೆ ನೀಡುವುದು ವಿಶೇಷವಾಗಿದೆ.

ಕಲ್ಲುಹೂವು ಪೊದೆಗಪ್ಪೆ                                                             ©  ಗಿರೀಶ್ ಗೌಡ

ಪಶ್ಚಿಮಘಟ್ಟದ ವಿವಿಧ ಭಾಗಗಳಲ್ಲಿ ಕಂಡುಬರುವ ಕಲ್ಲುಹೂವು ಪೊದೆಗಪ್ಪೆ Rhacophoridae ಕುಟುಂಬಕ್ಕೆ ಸೇರುತ್ತವೆ. ಇದನ್ನು ವೈಜ್ಞಾನಿಕವಾಗಿ Raorchestes nerostagona ಎಂದು ಕರೆಯಲಾಗುತ್ತದೆ. ಮರಗಳ ಮೇಲಿಂದ ಹೊಮ್ಮುವ ಈ ಕಪ್ಪೆಗಳ ಕರೆಯು, ಮಳೆ ಹನಿಯು ನೀರಿನಲ್ಲಿ ಬಿದ್ದಾಗ ಉಂಟಾಗುವ ಶಬ್ಧವನ್ನು ಹೋಲುತ್ತದೆ. ಮೂತಿಯು ದುಂಡಾಗಿದ್ದು, ಚರ್ಮವು ಒರಟಾಗಿರುತ್ತದೆ. ವೆಬ್ಡ್ ಕಾಲ್ಬೆರಳುಗಳ ಮಧ್ಯೆ ವೆಬ್ಬಿಂಗ್ ಇರುವುದು ವಿಶೇಷವಾಗಿದೆ. ಈ ಕಪ್ಪೆಗಳ ಮೈ ಬಣ್ಣವು ಕಲ್ಲುಹೂಗಳಿಂದ ಆವೃತವಾದ ಮರದ ತೊಗಟೆಯನ್ನು ಹೋಲುವುದರಿಂದ ಪರಭಕ್ಷಕರಿಂದ ರಕ್ಷಿಸಿಕೊಳ್ಳಲು ಅನುಕೂಲವಾಗುತ್ತದೆ.

 ಪೊನ್ಮುಡಿ ಪೊದೆಗಪ್ಪೆ                                                                                                                             © ಗಿರೀಶ್ ಗೌಡ

ಭಾರತದ ಪಶ್ಚಿಮಘಟ್ಟಗಳಿಗೆ ಸ್ಥಳೀಯವಾಗಿರುವ ಈ ಪೂನ್ಮುಡಿ ಪೊದೆಗಪ್ಪೆಗಳನ್ನು ಮೊದಲು ಪೊನ್ಮುಡಿ ಬೆಟ್ಟದಲ್ಲಿ ದಾಖಲಿಸಲಾಗಿದ್ದು, ಕೇರಳದ ವೈನಾಡ್, ಇಡುಕ್ಕಿ, ತಿರುವನಂತಪುರಂ ಜಿಲ್ಲೆಗಳಲ್ಲಿ ಮತ್ತು ತಮಿಳುನಾಡಿನ ವಾಲ್ಪಾರೈಗಳಲ್ಲಿಯೂ ಕಾಣಬಹುದಾಗಿದೆ. ಇವು Rhacoporidae ಕುಟುಂಬಕ್ಕೆ ಸೇರಿದ್ದು, Raorchestes ponmudi ಎಂಬ ವೈಜ್ಞಾನಿಕ ಹೆಸರನ್ನು ಹೊಂದಿವೆ. ಬೂದುಬಣ್ಣದ ಹಿಂಭಾಗವನ್ನು ಹೊಂದಿರುವ ಈ ದೊಡ್ಡ ಪೊದೆಗಪ್ಪೆಗಳಿಗೆ ಚಾಚಿಕೊಂಡಿರುವ, ಬೂದು ಉಂಗುರದಿಂದ ಸುತ್ತುವರಿಯಲ್ಪಟ್ಟಿರುವ ಕೆಂಪು-ಕಂದು ಬಣ್ಣದ ಕಣ್ಣುಗಳು, ದುಂಡಗಿನ ಮೂತಿ ಇರುವುದನ್ನು ಕಾಣಬಹುದು. ಕಣ್ಣಿನ ಹಿಂಭಾಗದಲ್ಲಿ ಕಪ್ಪು ಬಣ್ಣದ ಎರಡು ಪಟ್ಟಿಗಳನ್ನು ಹೊಂದಿದೆ. ಸಾಮಾನ್ಯವಾಗಿ ಈ ಕಪ್ಪೆಗಳು ನಿತ್ಯಹರಿದ್ವರ್ಣ ಕಾಡುಗಳ ಮೇಲಾವರಣದಲ್ಲಿ ನೆಲದಿಂದ 5-15 ಮೀಟರ್ ಎತ್ತರದಲ್ಲಿ ವಾಸಿಸುತ್ತವೆ. ನೇರ ಬೆಳವಣಿಗೆಯನ್ನು ಒಳಗೊಂಡಿರುವ ಇವುಗಳಲ್ಲಿ ಗೊದಮೊಟ್ಟೆಗಳು, ಮೊಟ್ಟೆಯೊಳಗೇ ಇದ್ದು ಸಣ್ಣ ಕಪ್ಪೆಗಳಾಗಿ ಬೆಳೆಯುತ್ತವೆ

ಚಿತ್ರಗಳು :  ಗಿರೀಶ್ ಗೌಡ
        ಲೇಖನ : ದೀಪ್ತಿ ಎನ್.

Print Friendly, PDF & Email
Spread the love
error: Content is protected.