ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

© ವಿಪಿನ್ ಬಾಳಿಗಾ ಬಿ. ಎಸ್., ವಾಯ್ನಾಡ್ ಪೊದೆಗಪ್ಪೆ

ವಾಯ್ನಾಡ್ ಪೊದೆಗಪ್ಪೆ (Wayanad Bush frog) ಕೇರಳ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಸ್ಥಳೀಯವಾಗಿ ಕಂಡುಬರುವ ಈ ಕಪ್ಪೆಗಳನ್ನು ವೈಜ್ಞಾನಿಕವಾಗಿ Pseudophilautus wynaadensis ಎಂದು ಕರೆಯುತ್ತಾರೆ. ಇವು ರಾಕೋಫೋರಿಡೆ (Rhacophoridae) ಕುಟುಂಬಕ್ಕೆ ಸೇರುತ್ತವೆ. ನಿಶಾಚರ ಜೀವಿಯಾದ ಈ ಕಪ್ಪೆಯು ಕಾಡು, ಪೊದೆ ಮತ್ತು ನಗರ ಪ್ರದೇಶಗಳಲ್ಲಿ ಯಥೇಚ್ಛವಾಗಿ ಕಾಣಸಿಗುತ್ತದೆ. ದೇಹವು ತೆಳ್ಳಗಿದ್ದು, ಮೊನಚಾದ ಮೂಗಿನ ಮೇಲೆ ತ್ರಿಕೋನಾಕೃತಿಯ ಬಿಳಿ ಮಚ್ಚೆಯನ್ನು ಹೊಂದಿದೆ ಹಾಗೂ ಗಂಟಲು ತಿಳಿ ಬೂದು ಮಿಶ್ರಿತ ಹಳದಿ ಬಣ್ಣದ ಮಚ್ಚೆಗಳನ್ನು ಹೊಂದಿದೆ. ಈ ಕಪ್ಪೆಗಳು ತಮ್ಮ ಮೊಟ್ಟೆಗಳನ್ನು ತೇವಾಂಶವಿರುವ ಪ್ರದೇಶಗಳಲ್ಲಿ ಇಡುತ್ತವೆ ಹಾಗೂ ಜೀವನ ಚಕ್ರದಲ್ಲಿ ಗುದಮೊಟ್ಟೆ ಮರಿ (tadpole) ಹಂತವಿಲ್ಲದಿರುವುದು ವಿಶೇಷವಾಗಿದೆ..

© ವಿಪಿನ್ ಬಾಳಿಗಾ ಬಿ. ಎಸ್., ಕೂರ್ಗ್ ಹಳದಿ ಪೊದೆಗಪ್ಪೆ 

 ಕೂರ್ಗ್ ಹಳದಿ ಪೊದೆಗಪ್ಪೆ (Coorg yellow bush frog) ಕರ್ನಾಟಕದ ಪಶ್ಚಿಮ ಘಟ್ಟಗಳ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಹಾಗು ಕಾಫಿ ಮತ್ತು ಟೀ ತೋಟಗಳಲ್ಲಿ ಕಂಡುಬರುವ ಈ ಕಪ್ಪೆಗಳನ್ನು ವೈಜ್ಞಾನಿಕವಾಗಿ Raorchestes luteolus ಎಂದು ಕರೆಯುತ್ತಾರೆ. ಕೂರ್ಗ್ ಹಳದಿ ಪೊದೆಗಪ್ಪೆಗಳು ರಾಕೋಫೋರಿಡೆ (Rhacophoridae) ಕುಟುಂಬಕ್ಕೆ ಸೇರುತ್ತವೆ. ಚೂಪಾದ ಮೂಗು ಹಾಗು ನೀಲಿ ಬಣ್ಣದಿಂದ ಸುತ್ತುವರಿದ ಸುವರ್ಣ ಹಳದಿ ಬಣ್ಣದ ಕಣ್ಣುಗಳಿದ್ದು, ಮೈಬಣ್ಣವು ಹಳದಿ ಅಥವಾ ಹಳದಿ ಮಿಶ್ರಿತ ಕಂದು ಬಣ್ಣದ್ದಾಗಿರುತ್ತದೆ.  ಕಂದು ಬಣ್ಣದ ಚುಕ್ಕೆಗಳನ್ನು ಮತ್ತು ಮಸುಕಾದ ನಿರಂತರ ರೇಖೆಗಳನ್ನು ಹೊಂದಿರುತ್ತದೆ.

© ವಿಪಿನ್ ಬಾಳಿಗಾ ಬಿ. ಎಸ್.,  ಸಣ್ಣ ತೇಲುಕಪ್ಪೆ 

ಚಿಕ್ಕ ಮರಗಪ್ಪೆ (Small tree frog) ಕೇರಳ ಮತ್ತು ಕರ್ನಾಟಕದ ಪಶ್ಚಿಮ ಘಟ್ಟಗಳ ವಿವಿಧ ಭಾಗಗಳಲ್ಲಿ ಮತ್ತು ಕಾಫಿ ತೋಟಗಳಲ್ಲಿ ಕಂಡುಬರುವ ಈ ಕಪ್ಪೆಗಳನ್ನು ವೈಜ್ಞಾನಿಕವಾಗಿ Rhacophorus lateralis ಎಂದು ಕರೆಯುತ್ತಾರೆ. ಮತ್ತು ಇವುಗಳು ರಾಕೋಫೋರಿಡೆ (Rhacophoridae) ಕುಟುಂಬಕ್ಕೆ ಸೇರುತ್ತವೆ. ಮರಗಳ ಮೇಲೆ ವಾಸಿಸುವ ಇವುಗಳು ತಮ್ಮ ಮೊಟ್ಟೆಗಳನ್ನು ಎಲೆಗಳ ಮೇಲೆ ಇಡುತ್ತವೆ. ಚುಕ್ಕೆಗಳನ್ನೊಳಗೊಂಡ ಹಸಿರು ಅಥವಾ ಕಂದು ಮೇಲ್ಮೈ ಹಾಗೂ ಮೂಗಿನ ಹೊಳ್ಳೆಯಿಂದ ದೇಹದ ಮೇಲ್ಭಾಗದ ಎರಡೂ ಬದಿಯಲ್ಲಿ ಹಳದಿ ಗೆರೆಯಿರುವುದು ವಿಶಿಷ್ಟವಾಗಿದೆ. ಒತ್ತಡಕ್ಕೆ ಒಳಗಾದಾಗ ತಮ್ಮ ಬಣ್ಣವನ್ನು ಬದಲಾಯಿಸುವುದನ್ನು ಕಾಣಬಹುದಾಗಿದೆ.

© ವಿಪಿನ್ ಬಾಳಿಗಾ ಬಿ. ಎಸ್., ಹಳದಿ ಕಪ್ಪೆ

Golden-backed frog (ಹಳದಿ ಬೆನಿನ್ನ ಕಪ್ಪೆ) ಭಾರತದ ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿರುವ ಈ ಕಪ್ಪೆಗಳನ್ನು ವೈಜ್ಞಾನಿಕವಾಗಿ Indosylvirana sp ಎಂದು ಕರೆಯುತ್ತಾರೆ. ಇವುಗಳನ್ನು ರಾನಿಡೇ (Ranidae) ಕುಟುಂಬಕ್ಕೆ ಸೇರಿಸಲಾಗಿದೆ. ನಿತ್ಯಹರಿದ್ವರ್ಣ ಕಾಡುಗಳು, ಬಿದಿರಿನ ಪೊದೆಗಳು, ಕರಾವಳಿ ಪ್ರದೇಶಗಳು ಮತ್ತು ಭತ್ತದ ಗದ್ದೆಗಳು ಸೇರಿದಂತೆ ವಿವಿಧ ರೀತಿಯ ಆವಾಸ ಸ್ಥಾನಗಳಲ್ಲಿ ಕಂಡುಬರುತ್ತವೆ. ಈ ಕಪ್ಪೆಯ ಹಿಂಭಾಗವು ಕಿತ್ತಳೆ ಅಥವಾ ಕಂದು ಬಣ್ಣದ್ದಾಗಿದ್ದು, ಕಪ್ಪು ಅಥವಾ ಕಂದು ಬಣ್ಣದ ಚುಕ್ಕೆಗಳನ್ನೊಳಗೊಂಡು ನಯವಾಗಿರುತ್ತದೆ. ಎರಡೂ ಬದಿಗಳಲ್ಲಿ ಅಗಲವಾದ, ಗಾಢ ಕಂದು ಬಣ್ಣದ ಪಟ್ಟಿಯು ಮೂಗಿನ ಹೊಳ್ಳೆಗಳಿಂದ ಹಿಂಭಾಗಕ್ಕೆ ಸಾಗುತ್ತದೆ. ಬೆರಳುಗಳ ತುದಿಗಳು ವಿಸ್ತಾರವಾದ ತಟ್ಟೆಗಳನ್ನು ಹೊಂದಿರುತ್ತವೆ.

ಚಿತ್ರಗಳು:  ವಿಪಿನ್ ಬಾಳಿಗಾ ಬಿ. ಎಸ್.
       ಲೇಖನ: ದೀಪ್ತಿ ಎನ್.

Print Friendly, PDF & Email
Spread the love
error: Content is protected.