ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

© ವಿಪಿನ್ ಬಾಳಿಗಾ., ಸ್ಟ್ರಿಗೊಪ್ಲಸ್ ಏಡಿ ಜೇಡ

ಸ್ಟ್ರಿಗೊಪ್ಲಸ್ ಏಡಿ ಜೇಡಗಳು(Strigoplus Crab Spiders) ಇರುವೆಗಳನ್ನು ಹಿಡಿಯುವಲ್ಲಿ ಪರಿಣಿತಿ ಹೊಂದಿರುವ ನಿಷ್ಣಾತ  ಬೇಟೆಗಾರರು. ಜೆರ್ಡಾನ್‌ನ ಜಿಗಿಯುವ ಇರುವೆಗಳು ಸಹ ಪ್ರಬಲವಾದ ಏಕಾಂಗಿ ಬೇಟೆಗಾರರಾಗಿದ್ದು, ಮಿಡತೆಗಳಂತಹ ದೊಡ್ಡ ಬೇಟೆಯನ್ನು ಏಕಾಂಗಿಯಾಗಿ ಉರುಳಿಸುವ ಹಾಗೂ ಹಾರುವ ಕೀಟಗಳನ್ನು ಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ. ಆದರೂ ಈ ಏಡಿ ಜೇಡಗಳು ಜೆರ್ಡಾನ್ ಜಿಗಿಯುವ ಇರುವೆಯನ್ನು ಹಿಡಿದಿದ್ದ ಪರಿ ನಮ್ಮಲ್ಲಿ ಆಶ್ಚರ್ಯವನ್ನುಂಟುಮಾಡಿತು. ಈ ಅದ್ಭುತ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ನಾವು ಹರ ಸಾಹಸವನ್ನೇ ಪಡಬೇಕಾಯಿತು. ಹುಲ್ಲುಗಾವಲಿನ ಮಧ್ಯದಲ್ಲಿನ ಒಂದು ಸಣ್ಣ ಹುಲ್ಲಿನ ಮೇಲೆ ಜೆರ್ಡಾನ್ ಇರುವೆಯನ್ನು ಹಿಡಿದಿದ್ದ ಈ ಏಡಿ ಜೇಡವನ್ನು ಕಂಡ ನಾವು ಆ ಹುಲ್ಲು ಸ್ವಲ್ಪವೂ ಅಲುಗಾಡದಂತೆ ಹೊರ ತಂದು, ಒಂದು ಕೈನಲ್ಲಿ ಕ್ಯಾಮೆರಾ ಹಿಡಿದು ಮತ್ತೊಂದು ಕೈಯಲ್ಲಿ ಆ ಹುಲ್ಲನ್ನು ಹಿಡಿದು 2-3 ಫೋಟೋ ಕ್ಲಿಕ್ಕಿಸುವಲ್ಲಿ ಕೈ ಸೋತು ಹೋಗುತ್ತಿತ್ತು. ಆದರೂ ಈ ಅಪರೂಪದ ಕ್ಷಣವನ್ನು ಸೆರೆಹಿಡಿದು ನಿಧಾನಕ್ಕೆ ಆ ಜೇಡವನ್ನು ಮೊದಲಿದ್ದ ಜಾಗದಲ್ಲೇ ಬಿಡಲಾಯಿತು. ಆದರೂ ಅಷ್ಟು ಪ್ರಬಲ ಹೋರಾಟಗಾರ ಇರುವೆಯನ್ನು ಈ ಜೇಡ ಬೇಟೆಯಾಡಿದ ಪರಿಯನ್ನು ನೋಡಲಿಲ್ಲವಲ್ಲ ಎನ್ನುವ ಕೊರಗು ಈ ಫೋಟೋ ಕಂಡಾಗಲೆಲ್ಲಾ ಕಾಡುತ್ತದೆ.

© ವಿಪಿನ್ ಬಾಳಿಗಾ., ಹೈಲಸ್ ಹಾರುವ ಜೇಡ

ಹೈಲಸ್ ಪ್ರಭೇದದಲ್ಲಿನ ಈ ಹಾರುವ ಜೇಡವು ಅದ್ಭುತ ಬೇಟೆಗಾರ. ಈ ಮೇಲಿನ ಚಿತ್ರವು ನನಗೆ ಸಿಕ್ಕ ಪರಿಯೇ ಆಕಸ್ಮಿಕ. ಒಂದು ದಿನ ಸಂಜೆ ನಾನು ಮನೆಯ ಮಹಡಿಯ ಮೇಲಿರುವ ಹೂಕುಂಡಗಳಲ್ಲಿ ಯಾವುದಾದರೂ ಕುತೂಹಲಕರ ಕೀಟಗಳು ಸಿಗಬಹುದೇ ಎಂದು ಪರಿಶೀಲಿಸುತ್ತಿದ್ದೆ. ಇದ್ದಕ್ಕಿದ್ದಂತೆ ಏನೋ ಬಂದು ಮಹಡಿಯ ಮೇಲೆ ನನಗಿಂತ ಕೆಲವೇ ಅಡಿಗಳಷ್ಟು ದೂರದಲ್ಲಿ ಬಿದ್ದಂತಾಯಿತು. ಸ್ವಲ್ಪ ಹತ್ತಿರ ಹೋಗಿ ನೋಡಿದಾಗ ತಿಳಿದದ್ದು. ಅವು ಸಂಯೋಗದಲ್ಲಿರುವ ಜೋಡಿ ನೊಣಗಳೆಂದು. ಹಾಗೆಯೇ ಆ ನೊಣಗಳನ್ನು ಗಮನಿಸುತ್ತಿದ್ದ ನನಗೆ ಅಲ್ಲಿರುವುದು ಎರಡಲ್ಲ, ಮೂರು ನೊಣ ಎನಿಸಿತು. ಅರೆ ಏನಿದು ಸಂಯೋಗ ಕ್ರಿಯೆಯಲ್ಲಿ ಮೂರು ನೊಣಗಳೇ? ವಿಚಿತ್ರವಾಗಿದೆಯಲ್ಲಾ! ಎಂದು ಇನ್ನೂ ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದಾಗ ತಿಳಿಯಿತು. ಅಲ್ಲಿರುವ ಇನ್ನೊಂದು ಜೀವಿ ನೊಣವಲ್ಲ, ಜೇಡವೆಂದು! ಹೌದು ಸಂಯೋಗದಲ್ಲಿರುವ ಒಂದು ನೊಣದ ಹೊಟ್ಟೆಯನ್ನು ಈ ಹೈಲಸ್ ಪ್ರಭೇದದ ಜೇಡ ಗಟ್ಟಿಯಾಗಿ ಹಿಡಿದಿತ್ತು. ಮುಂದೇನಾಗುತ್ತೋ ನೋಡೋಣವೆಂದು ನಾನು ಕುತೂಹಲದಿಂದ ನೋಡುತ್ತಾ ನಿಂತಿದ್ದೆ. ಆ ಜೋಡಿ ನೊಣಗಳು ಈ ಜೇಡವನ್ನು ಎತ್ತಿಕೊಂಡು ಒಂದೆರಡು ಅಡಿ ಮೇಲಕ್ಕೇ ಹಾರಿದವು. ಅಲ್ಲಿಯೇ ಒಂದೆರಡು ಸುರಳಿ ಸುತ್ತಿದರೂ ಆ ಜೇಡ ತನ್ನ ಬಿಗಿಯನ್ನು ಸಡಲಿಸಲಿಲ್ಲ. ಅಲ್ಲಿಂದಲೇ ಎರಡೂ ನೊಣಗಳು ದೊಪ್ಪನೆ ಮತ್ತೇ ನೆಲದ ಮೇಲೆ ಬಿದ್ದು ಬೇರ್ಪಟ್ಟವು. ಆಗ ಜೇಡವು ಅವುಗಳಿಂದ ಬೇರ್ಪಟ್ಟು ಪೆಚ್ಚಾಗಿ ಅಲ್ಲೇ ಕುಳಿತಿತು. ಮೊಬೈಲ್ ಅಥವಾ ಕ್ಯಾಮೆರಾ ತರದೆ ಬರಿ ಗೈಲಿ ಬಂದಿದ್ದ ನಾನು ಈ ಅಪರೂಪದ ಕ್ಷಣವನ್ನು ಸೆರೆಯಿಡಿಯಲು ಆಗಲಿಲ್ಲವಲ್ಲ ಎಂದು ಕೈ ಕೈ ಹಿಸುಕಿಕೊಂಡೆ. ಕಡೇ ಪಕ್ಷ ಈ ಜೇಡವನ್ನಾದರೂ ಚಿತ್ರಿಸೋಣವೆಂದು ಕ್ಯಾಮೆರಾ ತರಲು ಓಡಿದೆ, ಅದರ ಪ್ರತಿಫಲವೇ ಈ ಮೇಲಿನ ಚಿತ್ರ.

© ತುಷಾರ್ ಜಿ. ಆ© ವಿಪಿನ್ ಬಾಳಿಗಾ.,  ಬಲೆ ಎಸೆಯುವ ಜೇಡ

ಈ ಬಲೆ ಎಸೆಯುವ ಜೇಡದ ಬಗ್ಗೆ ಹತ್ತು ವರ್ಷಗಳ ಹಿಂದೆ ಓದಿದಾಗಲಿಂದಲೂ ಈ ಪ್ರಬೇಧಗಳು ಕಣ್ಣಿಗೆ ಕಾಣದೆ ರಹಸ್ಯವಾಗಿಯೇ ಉಳಿದಿತ್ತು. ಒಮ್ಮೆ ಕೆಲವು ವರ್ಷಗಳ ಹಿಂದೆ ಆಗುಂಬೆ ಕಾಡಿನಲ್ಲಿ ಕಣ್ಣಿನ ಮಟ್ಟದಲ್ಲೇ ಇದನ್ನು ಮುಖಾ-ಮುಖಿ ಭೇಟಿಯಾಗಿದ್ದೆನಾದರೂ ಫೋಟೋ ತೆಗೆಯಲು ಹೋದಾಗ ಸುತ್ತಲಿನ ಎಲೆ ಅಲುಗಾಡಿ ಎಚ್ಚರಗೊಂಡ ಅದು ಅದರ ಹಿಂದೆ ಇದ್ದ ಎಲೆಯ ಪಕ್ಕದಲ್ಲೇ ಬಚ್ಚಿಟ್ಟುಕೊಂಡಿತು. ಅದನ್ನು ಆ ಪ್ರಾಂತ್ಯದಲ್ಲಿ ಕಂಡ ನನಗೆ ಈ ಬಲೆ ಎಸೆಯುವ ಜೇಡಗಳ ಆವಾಸ ಮಲೆನಾಡು ಎಂದೇ ತಿಳಿದಿದ್ದೆ. ಆದರೆ ಮೊನ್ನೆ ಮೈಸೂರಿನ ನನ್ನ ಗೆಳೆಯರ ತೋಟದಲ್ಲಿ ಇದನ್ನು ಮತ್ತೊಮ್ಮೆ ಕಂಡ ನನಗೆ, ಆವಾಸದ ಬಗ್ಗೆ ಮೊದಲು ನಾನು ಎಣಿಸಿದ್ದ ಊಹೆ ತಪ್ಪೆನಿಸಿತು. ಅಲ್ಲಿ ಈ ಜೇಡದ ಆವಾಸದ ಬಗ್ಗೆ ಸಂಪೂರ್ಣವಾಗಿ ತಿಳಿಯಿತು ಹಾಗೂ ಅಂದಿನಿಂದ ಮಲೆನಾಡನ್ನು ಹೊರತು ಪಡಿಸಿ ಬೇರೆ ಕಡೆಯಲ್ಲೂ ಈ ಜೇಡವನ್ನು ಸ್ನೇಹಿತರು ದಾಖಲಿಸುವುದನ್ನು ಗಮನಿಸಿದೆ. ಒಮ್ಮೆ ಹಿಂಗಾರಕ್ಕೆ ಹೋಗಿದ್ದ ನಾನು ಜೇಡಗಳ ಹುಡುಕಾಟದಲ್ಲಿ ತೊಡಗಿದ್ದೆ. ಆಗ ಎಲೆಗೆ ಅಂಟಿಕೊಂಡಂತೆ, ಯಾವುದೋ ಜೇಡ ಓಡಿದಂತೆ ಕಂಡಿತು. ಮೊದ ಮೊದಲು ನನಗೆ ಅದು ಏಡಿ ಜೇಡ ಎನಿಸಿತು. ಒಂದು ಸೆಂಟೀ ಮೀಟರ್ ಕ್ಕಿಂತಲೂ ಚಿಕ್ಕದಿದ್ದ ಅದನ್ನು ಇನ್ನೂ ಸೂಕ್ಷ್ಮವಾಗಿ ಗಮನಿಸಿದಾಗ ತಿಳಿದದ್ದು ಇದು ಒಂದು ಬಲೆ ಎಸೆಯುವ ಜೇಡರ ಮರಿ ಎಂದು. ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ಎಲೆಯ ಕೆಳಗಿನ ಭಾಗದಲ್ಲಿ ನೇತಾಡಿಕೊಂಡಿದ್ದ ಇದು, ಸ್ವಲ್ಪ ಅಡಚಣೆಯಾದರು ಬಚ್ಚಿಟ್ಟುಕೊಳ್ಳಲು ತಯಾರಿತ್ತು. ಹಾಗೋ-ಹೀಗೋ ಒಂದು ಚಿತ್ರವನ್ನು ಸೆರೆಹಿಡಿಯುವಲ್ಲಿ ನಾನು ಯಶಸ್ವಿಯಾದೆ. ಈ ಜೇಡವು ಬಲೆಯನ್ನು ಮೀನುಗಾರರ ರೀತಿ ತನ್ನ ಬೇಟೆಗೆ ಎಸೆಯುವ ಕಾರಣ ಇದನ್ನು ಬಲೆ ಎಸೆಯುವ ಜೇಡ ಎನ್ನುತ್ತಾರೆ.

© ವಿಪಿನ್ ಬಾಳಿಗಾ., ಪಾಲಿರಾಚಿಸ್ ಇರುವೆ ಅನುಕರಣೆಯ ನೆಗೆ ಜೇಡ

ಈ ನೆಗೆ ಜೇಡವು, ಪಾಲಿರಾಚಿಸ್ ಎಂಬ ಇರುವೆ ಜಾತಿಯ ಪ್ರಭೇದವನ್ನು ಅನುಕರಣೆ ಮಾಡುವ ಕಾರಣ ಈ ಹೆಸರು ಬಂದಿದೆ. ಈ ಭಯಗ್ರಸ್ತ ಜೇಡವು ಗಿಡದ ಹೇನನ್ನೇ(Planthopper) ಊಟಕ್ಕಾಗಿ ಅವಲಂಬಿಸಿದೆ. ಇದನ್ನು ನಾನು ಕಂಡಾಗ ಅದು ಒಂದು ದುರ್ಬಲ ಸಸ್ಯದ ಮೇಲೆ ಇತ್ತು. ಆದರೆ ಅಲ್ಲಿ ಅದರ ಚಿತ್ರವನ್ನು ತೆಗೆಯಲು ಅಸಾಧ್ಯವಿದ್ದ ಕಾರಣ. ಬಲು ಎಚ್ಚರದಿಂದ ಅದನ್ನು ಒಣಗಿದ ಎಲೆಯ ಮೇಲೆ ಇಟ್ಟು ಚಿತ್ರಿಸಲಾಯಿತು.  ಸಾಮಾನ್ಯವಾಗಿ ನೆಗೆ ಜೇಡಗಳ ಚಿತ್ರಗಳನ್ನು ತೆಗೆಯುವುದು ಬೇರೆ ಜೇಡಗಳಿಗೆ ಹೋಲಿಸಿದರೆ ಬಲು ಸುಲಭ. ಆದರೆ ಸ್ವಲ್ಪೇ ಸ್ವಲ್ಪ ತೊಂದರೆ ಇದೆ ಎಂದು ತಿಳಿದರೂ ಬಾಯಲ್ಲಿರುವ ಊಟವನ್ನೂ ಸಹ ಬಿಟ್ಟು ಒಡುತ್ತವೆ. ಛಾಯಾಗ್ರಾಹಕರಾಗಿ ಈ ವಿಷಯದ ಬಗ್ಗೆ ತುಂಬಾ ಜಾಗರೂಕರಾಗಿ ಇರಬೇಕಾಗುತ್ತದೆ.  

ಚಿತ್ರಗಳು – ಲೇಖನ :  ವಿಪಿನ್ ಬಾಳಿಗಾ
          ಕನ್ನಡಕ್ಕೆ : ನಾಗೇಶ್ ಓ ಎಸ್

Print Friendly, PDF & Email
Spread the love
error: Content is protected.