ವಿದ್ಯುತ್ ಅಂಟು ತಂತು (ತಂದ ) ಆಪತ್ತು!

ವಿದ್ಯುತ್ ಅಂಟು ತಂತು (ತಂದ ) ಆಪತ್ತು!

©ROBERT ZARNOWSKI

ಅಪ್ಪ ರೈತನಾದರೂ ಸಮಯ ದೊರೆತಾಗ ಊರಿಗೆ ತಿಳಿದ ಎಲೆಕ್ಟ್ರಿಷಿಯನ್ ಕೂಡಾ ಆಗಿದ್ದರು. ಹೀಗೊಂದು ದಿನ ನಾನು, ಅಪ್ಪ, ಅಮ್ಮ ಮತ್ತು ಅಕ್ಕಂದಿರೆಲ್ಲರೂ ಅಪ್ಪನ ಜೊತೆ ಕೂತು ಹಾಗೆ ಹರಟೆ ಹೊಡೆಯುತ್ತಾ ಸಣ್ಣಸಣ್ಣ ಬಲ್ಬುಗಳನ್ನು ವೈರಿಗೆ ಅಂಟಿಸುತ್ತಾ ಮದುವೆ ಸಂಭ್ರಮಗಳಲ್ಲಿ ಬಳಸುವ ಸೀರಿಯಲ್ ಸೆಟ್ಟುಗಳನ್ನು ಮನೆಯಲ್ಲಿಯೇ ತಯಾರಿಸುತ್ತಿದ್ದೆವು. ಅಂಗಡಿಯಲ್ಲಿ ತಯಾರಾದ ಸೀರಿಯಲ್ ಸೆಟ್ಟುಗಳು ದುಬಾರಿ ಎಂದೇನೋ ಅಪ್ಪ ಅವುಗಳನ್ನು ಮನೆಯಲ್ಲಿಯೇ ತಯಾರಿಸೋಣ ಎಂದು ನಿರ್ಧಾರ ಮಾಡಿ, ಮನೆಯವರನ್ನೇ ಬಳಸಿಕೊಂಡು ಸೀರಿಯಲ್ ಸೆಟ್ ತಯಾರಿಸುತ್ತಿದ್ದರು. ಆ ಚಿಕ್ಕವಯಸ್ಸಿನಲ್ಲೇ (ಸುಮಾರು 3-4ನೇ ತರಗತಿ ಹುಡುಗ) ಅದನ್ನೆಲ್ಲಾ ಕಲಿತಿದ್ದ ನನಗೆ ಒಳಗೊಳಗೆ ಅಭಿಮಾನದ ಖುಷಿ. ನಾನೂ ಒಂದು ರೇಂಜಿಗೆ ಎಲೆಕ್ಟ್ರಿಷಿಯನ್ನೇ ಎಂದು ನಂಬಿದ್ದೆ. ಹೀಗೊಂದು ಬಾರಿ ಸೀರಿಯಲ್ ಸೆಟ್ಟನ್ನು ತಯಾರಿಸಿದ ನಂತರ ಅದನ್ನು ಟೆಸ್ಟ್ ಮಾಡಬೇಕಿತ್ತು. ಹಾಗೆ ಮಾಡುವಾಗ ಮಧ್ಯ ಮಧ್ಯದಲ್ಲಿ ಬಲ್ಬುಗಳು ಅಂಟದೇ ಹೋದಲ್ಲಿ ಅಂತಹ ಬಲ್ಬುಗಳನ್ನು ಬದಲಾಯಿಸಬೇಕು ಅಥವಾ ಲೂಸ್ ಕನೆಕ್ಷನ್ ಇದ್ದಲ್ಲಿ ಸರಿಪಡಿಸಬೇಕು. ಹಾಗೆ ಸರಿಪಡಿಸುವಾಗ ಕೈ ವಿದ್ಯುತ್ ಇದ್ದ ವೈರ್ ಗೆ ತಾಗಿ ಝಳ್… ಎಂದು ಬಾರಿಸಿ ಒಂದೆರೆಡು ಅಡಿ ಹಿಂದಕ್ಕೆ ಎಸೆಯಿತು. ಆಗಲೇ ತಿಳಿದದ್ದು ಎಲೆಕ್ಟ್ರಿಷಿಯನ್ ಆಗಲು ಇಂತಹ ಶಾಕುಗಳನ್ನು ಕೂಡಾ ಸರಿಯಾಗಿ ಅನುಭವಿಸಬೇಕಾಗುತ್ತದೆ ಎಂದು. ಆ ಅನುಭವ ತುಂಬಾ ಹೊಸದಾಗಿತ್ತು. ಏಕೆಂದರೆ ಕಣ್ಣಿಗೇ ಕಾಣದ ಒಂದು ಶಕ್ತಿ ನಮ್ಮನ್ನೇ ದೂರಕ್ಕೆ ಎಸೆಯುವ ಪ್ರಭಾವ ಹೊಂದಿದೆ ಎಂದು ಅಚ್ಚರಿ ಕೂಡಾ ಆಯ್ತು. ಆದರೆ ಕಡಿಮೆ ಪರಿಣಾಮದ ಅಂತಹ ವಿದ್ಯುತ್ ಶಕ್ತಿ (ಎಲೆಕ್ಟ್ರಿಕ್ ಚಾರ್ಜ್) ಒಂದು ಶಿಲೀಂಧ್ರ ರೋಗ ಪಸರಿಸುವಲ್ಲಿ ಸಹಾಯಕನಾಗಿ ಕೆಲಸ ಮಾಡಬಹುದು ಎಂದು ಊಹಿಸಲೂ ಆಗಿರಲಿಲ್ಲ (ಬೆಳೆದು ಡಿಗ್ರಿ ಪಡೆದ ನಂತರವೂ). ಆದರೆ ಹೊಸದೊಂದು ಸಂಶೋಧನೆ ಹೇಳುವ ಪ್ರಕಾರ ‘ಕ್ಯಾಂಡಿಡಾ ಆರಿಸ್’ ಎಂದು ವೈಜ್ಞಾನಿಕವಾಗಿ ಕರೆಯಲ್ಪಡುವ ರೋಗ ತರುವ ಶಿಲೀಂಧ್ರವೊಂದು ಎಲೆಕ್ಟ್ರಿಕ್ ಚಾರ್ಜ್ ಗಳನ್ನು ಬಳಸಿಕೊಂಡು ಬಹುಪಾಲು ಎಲ್ಲಾ ಜಾಗಗಳಲ್ಲೂ ಅಂಟಿಕೊಂಡು ರೋಗವನ್ನು ಹರಡುತ್ತಿವೆಯಂತೆ. ದುರಂತವೆಂದರೆ ಇದರ ಈ ವಿಶೇಷ ಅಂಟು ಗುಣದಿಂದ ಆಸ್ಪತ್ರೆಗಳಲ್ಲಿ, ಹಾಗೂ ಅಲ್ಲಿ ಬಳಸುವ ಉಪಕರಣಗಳ ಮೇಲೂ ಬಿಡದೆ ಸಲೀಸಾಗಿ ಅಂಟಿಕೊಂಡು ತಮ್ಮ ಕೆಲಸ ಮಾಡುತ್ತಿವೆಯಂತೆ!

© PAWEL TOCZYNSKI_THE IMAGE BANK_GETTY IMAGES

ಮಾರಕ ಗುಣ ಹೊಂದಿರುವ ಈ ಶಿಲೀಂಧ್ರಗಳು ಆಸ್ಪತ್ರೆಗಳಲ್ಲಿ ಹಾಗೂ ರೋಗಿಗಳ ಸುತ್ತಮುತ್ತಲಲ್ಲೇ ಹೀಗೆ ಹರಡುತ್ತಿರುವ ಕಾರಣ ಅದರಿಂದ ಬರುವ ರೋಗವೂ ಸಹ ವ್ಯಾಪಕವಾಗಿ ಹರಡುತ್ತಿದೆಯಂತೆ. ಬೇರೆ ಶಿಲೀಂಧ್ರಗಳು ನೀರಂಜಿಕೆಯ (ಹೈಡ್ರೊಫೋಬಿಕ್) ಪ್ರೋಟೀನ್ ಗಳನ್ನು ಉತ್ಪಾದಿಸಿ ತನ್ನ ಹಾಗೆ ಇರುವ ಬೇರೆ ನೀರಂಜಿಕೆಯ ವಸ್ತುಗಳ ಕಡೆ ಆಕರ್ಷಿತವಾಗಿ ಅವುಗಳ ಮೇಲೆ ಅಂಟಿಕೊಳ್ಳುತ್ತವೆ. ಆದರೆ ಈ ಕ್ಯಾಂಡಿಡಾ ಆರಿಸ್ ಶಿಲೀಂಧ್ರವು SCF1 ಎಂಬ ಪ್ರೋಟೀನ್ ಅನ್ನು ಉತ್ಪಾದಿಸುತ್ತದೆ. ಈ ಪ್ರೋಟೀನ್ ಧನಾತ್ಮಕ ಚಾರ್ಜ್ ಹೊಂದಿರುವುದರಿಂದ ಋಣಾತ್ಮಕ ಚಾರ್ಜ್ ಗೆ ಹೊಂದಿರುವ ವಸ್ತುಗಳಿಗೆಲ್ಲಾ ಆಕರ್ಷಿಸಲ್ಪಡುತ್ತದೆ, ನಾವು ನೋಡುವ ಗೋಡೆಗಳು, ಬಳಸುವ ಎಷ್ಟೋ ವಸ್ತುಗಳು ಹಾಗೂ ಆಸ್ಪತ್ರೆಯಲ್ಲಿರುವ ಉಪಕರಣಗಳು ಹಾಗೂ ನಮ್ಮ ಮನುಷ್ಯನ ಚರ್ಮಗಳ ಮೇಲೆ ಸಹ ಹೆಚ್ಚಾಗಿ ಋಣಾತ್ಮಕ ಚಾರ್ಜ್ ಹೊಂದಿರುವುದರಿಂದ ನಿರಾಯಾಸವಾಗಿ ಅವುಗಳ ಮೇಲೆ ಅಂಟಿಕೊಂಡು ಗಟ್ಟಿಯಾಗಿ ನೆಲೆಸಿಬಿಡುತ್ತವೆ. ಈ ರೀತಿಯ ಅಂಟುವಿಕೆ ಉಳಿದ ಶಿಲೀಂಧ್ರಗಳ ನೀರಂಜಿಕೆಯ ಅಂಟುವಿಕೆಗಿಂತ ಹೆಚ್ಚು ಬಲವಾಗಿರುತ್ತದೆಯಂತೆ. ಈ ಕಾರಣಗಳಿಂದಾಗಿ ಈ ಮಾರಕ ಶಿಲೀಂಧ್ರವು  ಎಲ್ಲೆಂದರಲ್ಲಿ ತಾನು ಸಲೀಸಾಗಿ ಅಂಟಿಕೊಂಡು ತಮ್ಮ ಕೆಲಸವನ್ನು ಶುರುಮಾಡುತ್ತವೆ. ಪರಿಣಾಮ, ನಮಗೆ ಬರುವ ಶಿಲೀಂಧ್ರ ರೋಗಗಳು ಹಾಗೂ ಅವುಗಳ ಮಾರಕ ಪರಿಣಾಮಗಳು.

ಇದನ್ನು ಪರೀಕ್ಷಿಸಲೆಂದೇ ವಿಜ್ಞಾನಿಗಳು ಇಲಿಗಳ ಸುತ್ತ ಹಾಗೂ ಚರ್ಮ ಜೀವಕೋಶಗಳ ಸುತ್ತ ಈ ಮಾರಕ ಶಿಲೀಂಧ್ರವನ್ನು ಇರಿಸಿದರು. ಸ್ವಲ್ಪ ಸಮಯದ ನಂತರ ಅದು ಎರಡರಲ್ಲೂ ಪರಿಣಾಮ ಬೀರಿತ್ತು. ಇದಕ್ಕೆ ಪ್ರತಿಯಾಗಿ ವಿಜ್ಞಾನಿಗಳು ಆ ಶಿಲೀಂಧ್ರಗಳು SCF1 ಪ್ರೋಟೀನ್ ಉತ್ಪಾದಿಸುವ ಗುಣವನ್ನೇ ನಿಲ್ಲಿಸಿದರು. ಆಗ ಅದು ಇಲಿಗಳ ಮೇಲೆ ಯಾವ ಪರಿಣಾಮ ಬೀರಲಿಲ್ಲ. ಇದರಿಂದ ಬಹುಶಃ ಈ ಮಾರಕ ಶಿಲೀಂಧ್ರ ಹರಡುತ್ತಿದ್ದ ಕಾಲು ಮುರಿದಂತೆ ಆಯಿತು. ಜೊತೆಗೆ ಅವುಗಳು ನೀಡುತ್ತಿದ್ದ ರೋಗಕ್ಕೆ ಮದ್ದು ಕೂಡಾ ಕಂಡುಹಿಡಿದ ಹಾಗಾಯಿತು.

ಹೇಳ ಹೆಸರಿಲ್ಲದ ಇಂತಹ ಎಷ್ಟೋ ರೋಗಗಳು ಈಗ ಇಷ್ಟು ಸಲೀಸಾಗಿ ಹರಡುತ್ತಿರುವುದು ಹಾಗೂ ಮಾರಕ ರೋಗಗಳನ್ನು ತರುತ್ತಿರುವುದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದರೆ, ಅದು ಎಲ್ಲೋ ಒಂದು ಕಡೆ ವೇಗವಾಗಿ ಬದಲಾಗುತ್ತಿರುವ ನಮ್ಮ ಜೀವನಶೈಲಿಯೇ ಕಾರಣ ಎಂದೆನಿಸುತ್ತದೆ. ಕೇವಲ ಜೀವನ ಶೈಲಿ ಬದಲಾಗಿದ್ದರೆ ಇಂತಹುದೆಲ್ಲಾ ನಡೆಯಬೇಕೆಂದಿಲ್ಲ. ಸಮಯ ಸರಿದಂತೆ ಎಲ್ಲವೂ ಬದಲಾಗುತ್ತದೆ. ‘ಬದಲಾವಣೆ ಜಗದ ನಿಯಮ’ ಎನ್ನುತ್ತಾರೆ. ಇಂತಹ ಘಟನೆಗಳಿಗೆ ಮುಖ್ಯ ಕಾರಣ ಬಹುಶಃ ಆ ಬದಲಾವಣೆಗಳು ಕುರುಡಾಗಿ, ಪ್ರಕೃತಿ ವಿರೋಧವಾಗಿರುವುದರಿಂದ. ಇಂತಹ ಎಚ್ಚರಿಕೆಯ ಉದಾಹರಣೆಗಳ ನಂತರವಾದರೂ ನಮ್ಮ ಬದಲಾದ ಜೀವನ ಶೈಲಿಗಳು ನಮ್ಮನ್ನು ಎಲ್ಲಿ ಕರೆದು ಹೋಗುತ್ತಿವೆ? ಎಂದು ಕಣ್ಣೊರೆಸಿ ನೋಡಬೇಕಿದೆ ಹಾಗೂ ಮುಂದಾಗುವ ಬದಲಾವಣೆಗಳ ಮೇಲೆ ನಿಗಾ ಇರಿಸುವುದು ಅನಿವಾರ್ಯ ಎನಿಸುತ್ತದೆ, ಅಲ್ಲವೇ…?

ಮೂಲ ಲೇಖನ: www.snexplores.org

ಲೇಖನ: ಜೈಕುಮಾರ್ ಆರ್.
    ಡಬ್ಲ್ಯೂ
.ಸಿ.ಜಿ., ಬೆಂಗಳೂರು ನಗರ ಜಿಲ್ಲೆ

Print Friendly, PDF & Email
Spread the love
error: Content is protected.