ನಾಯಕನೋ..? ಏಕಾಂಗಿಯೋ..?

ನಾಯಕನೋ..? ಏಕಾಂಗಿಯೋ..?

ಹತ್ತನೇ ತರಗತಿಯಲ್ಲಿ ಚೆನ್ನಾಗಿಯೇ ಅಂಕಗಳು ಬಂದಿದ್ದವು. ಪಿ. ಯು. ಸಿ. ಗೆ ಹತ್ತಿರದ ಒಂದು ಕಾಲೇಜಿನಲ್ಲಿ ಸೇರಲು ಹೊರಟೆ. ಅದೊಂದು ಕ್ರೈಸ್ತ ಕಾಲೇಜಾದ್ದರಿಂದ ಅಲ್ಲಿನ ಪ್ರಾಂಶುಪಾಲರು ಒಬ್ಬ ಫಾದರ್ ಆಗಿದ್ದರು. ಫಾದರ್ ರ ಪ್ರಕಾರ ಹತ್ತನೇ ತರಗತಿಯಲ್ಲಿ ಸ್ವಲ್ಪ ಅಂಕಗಳು ಬಂದಿದ್ದರಿಂದ ಅವರ ಸಲಹೆ ಹೀಗಿತ್ತು. ವಿಜ್ಞಾನ ವಿಷಯ ತೆಗೆದುಕೊಂಡಿರುವೆ, ಆಟೋಟಗಳ ಮೇಲೆ ಸಮಯ ವ್ಯರ್ಥ ಮಾಡದೆ ಗಮನ ಹೆಚ್ಚಾಗಿ ವಿಷಯಾಭ್ಯಾಸದ ಮೇಲಿಡಬೇಕು ಎಂದು. ಆದರೆ ನನಗೆ ಆಟ-ಪಾಠ ಎರಡೂ ಮುಖ್ಯವಾಗಿದ್ದವು. ಏಕೆಂದರೆ ದೈಹಿಕವಾಗಿ ದೃಢವಾಗಿರುವುದು ಮಾನಸಿಕ ಏಕಾಗ್ರತೆಗೆ ಬಹು ಸಹಕಾರಿಯಾದುದು. ಆ ಏಕಾಗ್ರತೆ ಮತ್ತು ಆಸಕ್ತಿಯಿಂದಲೇ ಬೇರೆ ಎಲ್ಲಾ ವಿಷಯ ಅಭ್ಯಾಸಗಳು ಸುಲಭವಾಗುವುದು ಅಲ್ಲವೇ? ತಕ್ಷಣಕ್ಕೆ ಸುಮ್ಮನಿದ್ದು ಆಮೇಲೆ ನೋಡಿಕೊಳ್ಳೋಣ ಎಂದು ಫಾದರ್ ಎದುರು ‘ಮೌನಮ್ ಸಮ್ಮತಿ ಲಕ್ಷಣಮ್’ ನಿಯಮ ಪಾಲಿಸಿದೆ.  ನಂತರ ಕಾಲೇಜಿಗೆ ಸೇರಲಾಗಿ ತರಗತಿಗಳು ಶುರುವಾಗಿ ಈಗ ತರಗತಿಗೆ ಒಬ್ಬ ನಾಯಕ ಬೇಕಿತ್ತು. ಕೇವಲ ಹದಿನೈದು ಜನರಿದ್ದ ತರಗತಿಯಲ್ಲಿ ಬಹುಶಃ ಅಂಕದ ಆಧಾರದ ಮೇಲೆ ನನ್ನನ್ನು ತರಗತಿಯ ನಾಯಕನನ್ನಾಗಿ ಮಾಡಿದರು. ನಾನೂ ಸಮ್ಮತಿಸಿದೆ. ಅದಕ್ಕೂ ಕಾರಣವಿದೆ. ಕೇವಲ ಭೌತಶಾಸ್ತ್ರ, ಜೀವಶಾಸ್ತ್ರ, ಗಣಿತ, ರಸಾಯನ ಶಾಸ್ತ್ರಗಳಿಗೇ ಆದ್ಯತೆ ನೀಡಿ ನಮ್ಮ ದೈಹಿಕ ಶಿಕ್ಷಣ ವಿಷಯವಾದ ಆಟಕ್ಕಾಗಿ ನನಗೆ ನೆನಪಿರುವ ಹಾಗೆ ವಾರದಲ್ಲಿ ಕೇವಲ ಒಂದೇ ಒಂದು ಅವಧಿಯಿತ್ತು. ನಮ್ಮ ದುರ್ದೈವವೆಂದರೆ ಆ ತರಗತಿಯನ್ನೂ ಈ ಮೇಲೆ ಹೇಳಿರುವ ಯಾವುದೋ ಒಂದು ವಿಷಯದ ಅಧ್ಯಾಪಕರೇ ತೆಗೆದುಕೊಳ್ಳುತ್ತಿದ್ದರು. ಹೀಗೆ ನಡೆಯುವುದನ್ನು ನೋಡಿ ತಾಳಲಾರದೆ ತರಗತಿಯ ನಾಯಕನಾದ ನಾನು ಒಂದು ನಿರ್ಧಾರ ತೆಗೆದುಕೊಳ್ಳಬೇಕಿತ್ತು. ತೆಗೆದುಕೊಂಡೆ. ಅದೇನೆಂದರೆ ಉಚಿತ ತರಗತಿಯೆಂದು ಭಾವಿಸಿ ಅಧ್ಯಾಪಕರು ತರಗತಿಗೆ ಧಾವಿಸುವುದರ ಒಳಗೇ ತರಗತಿಯಲ್ಲಿದ್ದ ಸ್ನೇಹಿತರೆಲ್ಲರನ್ನೂ ಸಾಲು ಮಾಡಿಸಿ ಸೀದಾ ಆಟದ ಮೈದಾನಕ್ಕೆ ಕರೆದುಕೊಂಡು ಹೋಗಿಬಿಡುತ್ತಿದ್ದೆ. ನಂತರ ಅಧ್ಯಾಪಕರು ಬಂದರೆ ಖಾಲಿ ತರಗತಿಯನ್ನು ನೋಡಿ ಕೆಲವರು ಹೊರಟುಹೋದರೆ ಕೆಲವರು ಬರಲು ಹೇಳಿಕಳುಹಿಸುತ್ತಿದ್ದರು. ಆದರೆ ನಾವು ವಾಪಸ್ಸು ತರಗತಿಗೆ ಹೋಗುತ್ತಿದ್ದ ವೇಗ ಮತ್ತು ಸಮಯವನ್ನು ಗಮನಿಸಿದ ಅಧ್ಯಾಪಕರು ಕ್ರಮೇಣ ಆಟದ ಅವಧಿಯನ್ನು ತೆಗೆದುಕೊಳ್ಳುವುದು ಕಡಿಮೆ ಮಾಡಿದರು. ಇದೋ ನಾಯಕನಾದರೆ ಇಂತಹ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬಹುದಿತ್ತು. ಆದರೆ ಕಾಲ ಸರಿದಂತೆ ಇದೇ ನಾಯಕತ್ವದ ಸಲುವಾಗಿ ಹೆಚ್ಚೆಚ್ಚು ಸಮಯವನ್ನು ನನ್ನ ಸ್ನೇಹಿತರ ಜೊತೆಗೆ ಕಳೆಯಲಾಗುತ್ತಿರಲಿಲ್ಲ. ಆದ ಕಾರಣ ಎರಡನೇ ವರ್ಷದಲ್ಲಿ ನಾಯಕತ್ವವನ್ನು ನನ್ನ ಸ್ನೇಹಿತನಿಗೇ ಕೊಟ್ಟು ನಾನು ಸ್ವಲ್ಪ ಸ್ವತಂತ್ರನಾದೆ. ಹೀಗೆ ನಾಯಕತ್ವವನ್ನು ಸಾಧಿಸಲು ಅವಕಾಶ, ಗುಣ, ಸಮಯ ಸಂದರ್ಭ ಹೀಗೆ ಹಲವು ಕಾರಣಗಳು ನಿರ್ಧರಿಸುತ್ತದೆ. ಆದರೆ ಅಮೇರಿಕಾದ ಯೆಲ್ಲೋ ಸ್ಟೋನ್ ನ್ಯಾಷನಲ್ ಪಾರ್ಕಿನಲ್ಲಿ ಕಂಡುಬರುವ ಬೂದು ತೋಳಗಳಿಗೆ ಈ ಗುಣವನ್ನು ಒಂದು ಪರಾವಲಂಬಿ ಏಕಕೋಶ ಜೀವಿ ನಿರ್ಧರಿಸುತ್ತಿದೆ ಎಂದು ಹೇಳುತ್ತಿದೆ ಈ ಸಂಶೋಧನೆ.

© TODOREAN GABRIEL_ISTOCK_GETTY

ಯೆಲ್ಲೋ ಸ್ಟೋನ್ ನ್ಯಾಷನಲ್ ಪಾರ್ಕಿನಲ್ಲಿ ನಡೆದ ಈ ಸಂಶೋಧನೆಯ ಪ್ರಕಾರ ಟೋಕ್ಸೋಪ್ಲಾಸ್ಮಾ ಗೊಂಡಿ ಎಂದು ಕರೆಯಲ್ಪಡುವ ಒಂದು ಏಕಕೋಶ ಪರಾವಲಂಬಿಯೇ ಇದಕ್ಕೆ ಕಾರಣ. ಸಂಶೋಧನೆಯ ಸಾರ ಹೀಗಿದೆ. ಈ ಬೂದು ತೋಳಗಳಲ್ಲಿ ಟಿ. ಗೊಂಡಿ ಪರಾವಲಂಬಿಯಿಂದ ಸೋಂಕಿಗೆ ಒಳಗಾದವು ಸೋಂಕಿಗೆ ಒಳಗಾಗದ ತೋಳಗಳಿಗಿಂತ ಹೆಚ್ಚು ಧೈರ್ಯಶಾಲಿ-ನಿರ್ಧಾರಗಳನ್ನು ದೈನಂದಿನ ಜೀವನಶೈಲಿಯಲ್ಲಿ ತೆಗೆದುಕೊಳ್ಳುತ್ತಿದ್ದವು. ಇದರ ಪರಿಣಾಮ ಸೋಂಕಿಗೆ ಒಳಗಾದ ಆ ತೋಳ ಒಂದಾ ತನ್ನ ಗುಂಪಿಗೆ ನಾಯಕನಾಗುತ್ತಿತ್ತು. ಇಲ್ಲವೇ ಗುಂಪನ್ನು ತೊರೆದು ಏಕಾಂಗಿಯಾಗುತ್ತಿತ್ತು. ಇದರಿಂದ ಅವುಗಳಿಗೆ ಉಪಯೋಗವೂ ಹೌದು, ಅಪಾಯವೂ ಹೌದು.

© RUSSELL BURDEN_PHOTODISC_GETTY

ಗೊಂಬೆ ಆಡಿಸುವವನನ್ನು ಹೋಲುವ ಈ ಪರಾವಲಂಬಿ ಏಕಕೋಶ ಜೀವಿಗೆ ತಾನು ಹೊಕ್ಕ ಪ್ರಾಣಿಗಳ ನಡವಳಿಕೆಯನ್ನು ಬದಲಾಯಿಸುವ ಗುಣವಿದೆ ಎಂಬ ಉದಾಹರಣೆಗಳಿವೆ. ಅದರಲ್ಲಿ ಒಂದೆಂದರೆ, ಈ ಪರಾವಲಂಬಿ ಇಲಿಗಳ ದೇಹವನ್ನು ಸೇರಿ ನಂತರ ಇಲಿಗಳಿಗೆ ಬೆಕ್ಕಿನ ಮೇಲೆ ಸಾಮಾನ್ಯವಾಗಿ ಅಥವಾ ತನ್ನ ಪ್ರವೃತ್ತಿಯಾದ ಹೆದರಿಕೆಯನ್ನು ಇಲ್ಲದ ಹಾಗೆ ಮಾಡಿಬಿಡುತ್ತದೆ. ಇದರಿಂದ ಬೆಕ್ಕು ಎದುರಿಗೆ ಬಂದರೂ ಹೆದರದೇ ನಿಂತ ಇಲಿಗಳನ್ನು ಬೆಕ್ಕು ನಿರಾಯಾಸವಾಗಿ ಗುಳುಂ ಮಾಡುತ್ತದೆ. ಇದರಿಂದ ಯಾರಿಗೇನು ಉಪಯೋಗ? ಒಳ್ಳೆಯ ಪ್ರಶ್ನೆ. ಹೀಗೆ ಮಾಡುವುದರಿಂದ ಅದೇ ಪರಾವಲಂಬಿಗೇ ಉಪಯೋಗವಿದೆ. ಹೇಗೆಂದುಕೊಂಡಿರಿ, ಸೋಂಕಿತ ಇಲಿಯನ್ನು ತಿಂದ ಬೆಕ್ಕಿನ ಚಿಕ್ಕ ಕರುಳಿನಲ್ಲೇ ತನ್ನ ಬಿಡಾರವನ್ನು ಹೂಡಿ ತನ್ನ ಜೀವನವನ್ನು ನಿರಾಯಾಸವಾಗಿ ನಡೆಸುತ್ತದೆ.

ಅದೇ ರೀತಿ ನಮ್ಮ ಬೂದು ತೋಳಗಳನ್ನೂ ಬಾಧಿಸುವ ಈ ಪರಾವಲಂಬಿ ಅವುಗಳ ಪ್ರವೃತ್ತಿಯಲ್ಲೇನಾದರೂ ಬದಲಾವಣೆ ತಂದೀತೆ ಎಂದು ಸಂಶೋಧಿಸಲು ಶುರು ಮಾಡಿದರು. ಅದಕ್ಕಾಗಿ 229 ತೋಳಗಳ 26 ವರ್ಷದ ಮಾಹಿತಿಯನ್ನು ಕಲೆ ಹಾಕಿದರು. ಆ ಮಾಹಿತಿಯಲ್ಲಿ ತೋಳಗಳ ರಕ್ತ ಪರೀಕ್ಷೆಗಳು ಮತ್ತು ವಿಜ್ಞಾನಿಗಳು ಗಮನಿಸಿದ ಅವುಗಳ ನಡವಳಿಕೆಯ ಅಧ್ಯಯನಗಳು ಇದ್ದವು. ಮೊದಲಿಗೆ ತೋಳಗಳಲ್ಲಿ ಯಾವುದು ಸೋಂಕಿತ ಮತ್ತು ಯಾವುದು ಅಲ್ಲ ಎಂದು ತಿಳಿಯಬೇಕಿತ್ತು. ಅದು ಸುಲಭ ಅದಕ್ಕಾಗಿ ಎಲ್ಲಾ ತೋಳಗಳಲ್ಲಿ ಟಿ. ಗೊಂಡಿ ಪರಾವಲಂಬಿಗೆ ತೋಳದಲ್ಲಿ ಉತ್ಪಾದನೆ ಆಗುವ ಪ್ರತಿಕಾಯ (antibody) ಗಳು ಇವೆಯೇ ಎಂದು ಪರೀಕ್ಷಿಸಿದರೆ ಆಯಿತು. ತಂದೆ, ತಾಯಿ ಮತ್ತು ತನ್ನ ಮಕ್ಕಳಿರುವ ಒಂದು ತೋಳದ ಗುಂಪಿನಲ್ಲಿ ಯಾವುದು ನಾಯಕ ಅಥವಾ ಯಾವ ತೋಳ ಗುಂಪನ್ನು ಬಿಟ್ಟು ಏಕಾಂಗಿಯಾಗಿದೆ ಎಂಬುದನ್ನೂ ಹಾಗೇ ಗುರುತಿಸಿಕೊಳ್ಳಲಾಯಿತು. ಏಕೆಂದರೆ ಹೀಗೆ ಗುಂಪಿನ ನಾಯಕನಾಗುವುದು ಮತ್ತು ಏಕಾಂಗಿಯಾಗುವುದು ಇವೆರಡೂ ಅಪಾಯಕಾರಿ ನಿರ್ಧಾರಗಳು. ಕಾರಣ ಏಕಾಂಗಿಯಾದರೆ ಬೇಟೆ ಆಡುವುದು ಕಷ್ಟವಾಗುತ್ತದೆ. ಬೇಟೆ ಇಲ್ಲದ ತೋಳ ಹಸಿವಿನಿಂದ ಸಾಯಬಹುದು. ಹಾಗೆಯೇ ನಾಯಕನಾಗಬೇಕೆಂದರೆ ಬೇರೆ ತೋಳಗಳ ಜೊತೆ ಸೆಣಸಾಡಬೇಕಾಗುತ್ತದೆ. ಹೀಗೆ ಸೆಣೆಸಾಡುವಾಗ ಮರಣ ಹೊಂದುವ ಸಾಧ್ಯತೆಗಳೂ ಇವೆ. ಆದರೆ ಈ ಸೋಂಕಿತ ತೋಳಗಳು ಸೋಂಕು ತಗುಲದ ತೋಳಗಳಿಗಿಂತ 11 ಪಟ್ಟು ಹೆಚ್ಚು ಏಕಾಂಗಿಯಾಗಿ ತೆರಳುವ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದರೆ, 46 ಪಟ್ಟು ಸೋಂಕಿತ ತೋಳಗಳ ನಿರ್ಧಾರಗಳು ತಾನು ನಾಯಕನಾಗಲು ತೆಗೆದುಕೊಳ್ಳುತ್ತಿದ್ದವಂತೆ. ಇದರಿಂದ ಸ್ಪಷ್ಟವಾಗುವ ವಿಷಯವೆಂದರೆ ಸೋಂಕಿತ ತೋಳಗಳು ಉಳಿದವುಗಳಿಗಿಂದ ಹೆಚ್ಚು ಧೈರ್ಯಶಾಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದವು ಎಂದು.

ಈ ಸಂಶೋಧನೆಯ ಒಂದೇ ಒಂದು ನ್ಯೂನ್ಯತೆಯೆಂದರೆ ಈಗ ನಡೆದ ಸಂಶೋಧನೆ ಬಂಧಿಸಿಟ್ಟ ತೋಳಗಳ ಮೇಲೆ ನಡೆಸಿದ್ದು. ಇದೇ ಪರಿಣಾಮ ಸ್ವಚ್ಚಂದವಾಗಿ ಕಾಡಿನಲ್ಲಿ ತಿರುಗುವ ವನ್ಯ ತೋಳಗಳಿಗೂ ಅನ್ವಯಿಸುವುದೇ ಎಂದು ಕೇಳಿದರೆ ಸಧ್ಯಕ್ಕೆ ಸ್ಪಷ್ಟ ಉತ್ತರವಿಲ್ಲ!

ಹಾಗೆ ನೋಡಿದರೆ ಯಾವುದನ್ನು ನಾವು ಸ್ಪಷ್ಟ ಅಥವಾ ನಿರ್ದಿಷ್ಟ ಎಂದು ನಂಬಿದ್ದೆವೋ ಅವುಗಳಲ್ಲಿ ಈಗಾಗಲೇ ಹಲವು ನಮಗೆ ಅರಿವಿಗೆ ಕಾಣದ ಅಸ್ಪಷ್ಟದ ಹಾದಿಯಲ್ಲಿ ನಿಂತಂತಿವೆ. ಯಾವುದು ಇಂದು ಸ್ಪಷ್ಟವೋ ಅವು ಮುಂದೆ ಅಸ್ಪಷ್ಟವೂ, ಈಗ ಯಾವುದು ಕ್ಲಿಷ್ಟವೋ ಅದು ಮುಂದೆ ಸ್ಪಷ್ಟವಾಗುವುದಿಲ್ಲ ಎಂಬುದಕ್ಕೆ ಉತ್ತರವಿದೆಯೇನು?

ಎಲ್ಲವೂ ಸ್ಪಷ್ಟವೆನಿಸುವಷ್ಟೇ ಅಸ್ಪಷ್ಟ ಎನ್ನುವುದನ್ನು ಜೀರ್ಣಿಸಿಕೊಳ್ಳುವುದೇ ನಮ್ಮ ನಿಯಮಿತ ಮೆದುಳಿಗೆ ಈಗಿರುವ ಕಷ್ಟ! ಈ ಅಸ್ಪಷ್ಟತೆಯ ಸ್ಪಷ್ಟತೆಯಲ್ಲಿ ನೀನು ನಾಯಕನೋ..? ಏಕಾಂಗಿಯೋ..?

ಮೂಲ ಲೇಖನ: www.snexplores.org

ಲೇಖನ: ಜೈಕುಮಾರ್ ಆರ್.
    ಡಬ್ಲ್ಯೂ
.ಸಿ.ಜಿ, ಬೆಂಗಳೂರು ನಗರ ಜಿಲ್ಲೆ

Print Friendly, PDF & Email
Spread the love
error: Content is protected.