ಕಾಡಿನ ಕಥೆ

ಕಾಡಿನ ಕಥೆ

© ನಾಗೇಶ್ ಓ. ಎಸ್.

(ಬೆಂಕಿಯಿಂದ ಅರಣ್ಯರೋದನಕ್ಕಿಲ್ಲವೇ ಮುಲಾಮು? ಉಪವಲಯ ಅರಣ್ಯಾಧಿಕಾರಿರವರ ಅನುಭವ ಕಥನ)

ವರ್ಷದಿಂದಾಚೆ ನಡೆದ ಘಟನೆ:

ಫೆಬ್ರವರಿ ತಿಂಗಳು ದಿನಾಂಕ ಮರೆತಿದೆ ಸಮಯ 11ರ ಆಸುಪಾಸಾಗಿತ್ತು, ಆಗಾಗಲೇ ಬಿಸಿಲು ತಾರಕಕ್ಕೇರಿತ್ತು. ನಾನು, ಧರ್ಮೇಶ, ಲಕ್ಕಪ್ಪ, ಮುತ್ತಪ್ಪ, ಶಂಕ್ರ, ಮಂಜ, ಪ್ರಮೋದ ಎಲ್ಲರೂ ಭದ್ರ ನದಿಯ ದಂಡೆಯಲ್ಲಿದ್ದ ಕಳ್ ಬೇಟೆ ತಡೆಯೋ ಕ್ಯಾಂಪಿನಲ್ಲಿ ಬೆಳಗಿನ ತಿಂಡಿ ತಿಂದು, ತಂತಮ್ಮ ಕೆಲಸದಲ್ಲಿ ಮಗ್ನವಾಗಿದ್ದೆವು. ನಾನು ಮಾವಿನ ಮರಕ್ಕೆ ಕಟ್ಟಿದ್ದ ಉಯ್ಯಾಲೆಯ ಮೇಲೆ ಕಾನೂರು ಹೆಗ್ಗಡತಿ ಕಾದಂಬರಿ ಓದುತ್ತಾ ಮಲಗಿದ್ದೆ, ಲಕ್ಕಪ್ಪ ದುರ್ಬೀನು ಹಿಡಿದು ಎದುರಿಗೆ ಮೇಯುತ್ತಿದ್ದ ಜಿಂಕೆಗಳನ್ನ ನೋಡುತ್ತಿದ್ದವನು ದುರ್ಬೀನು ಯಾವ ದಿಕ್ಕಿಗೆ ತಿರುಗಿಸಿದ್ದನೋ ಏನೋ, ಒಮ್ಮೆಗೆ ಹೆಬ್ಬೆಗಿರಿಗೆ ಬೆಂಕಿ ಬಿದ್ದಿದೆ ಅಂತಾ ಕೂಗುತ್ತಾ ಓಡಿಬಂದ. ಹೆಬ್ಬೆಗಿರಿ ನಾವಿದ್ದ ಕ್ಯಾಂಪಿಂದ ಪೂರ್ವ ದಿಕ್ಕಿಗೆ ಸಮುದ್ರ ಮಟ್ಟದಿಂದ 1300 ಮೀಟರ್ ಗಿಂತಲೂ ಹೆಚ್ಚು ಎತ್ತರ ಹಾಗೂ 6 ಕಿಲೋಮೀಟರ್ ದೂರದಲ್ಲಿತ್ತು. ಕಾಡಿಗೆ ಬೆಂಕಿ ಬಿದ್ದಿದೆ ಎಂದ ಕೂಡಲೆ ಉಟ್ಟ ಬಟ್ಟೆಯಲ್ಲಿಯೇ ಓಡುವಂತೇನು ಇರಲಿಲ್ಲ, ಅಷ್ಟು ದೂರ, ಎತ್ತರದ ಗುಡ್ಡಕ್ಕೆ ಏರಲು ಸೂಕ್ತ ಬಟ್ಟೆ, ಬೂಟು ಧರಿಸಿ, ಉಣ್ಣೆಯಿಂದ ರಕ್ಷಣೆಗೆ ಬೇವಿನ ಎಣ್ಣೆ ಅಥವಾ ಇಲಾಖೆ ಕೊಟ್ಟಿದ್ದ ಕೆಮಿಕಲ್ ದ್ರಾವಣ ಸವರಿಕೊಂಡು, ಬೆಂಕಿ ಆರಿಸಲು ಸೊಪ್ಪು ಕಡಿಯಲು ಮಚ್ಚು, ಎದುರಿಗೆ ಬರುವ ಆನೆಗಳಿಂದ ರಕ್ಷಣೆಗೆ ಬಂದೂಕು ಒಯ್ಯಬೇಕಿತ್ತು.

© ನಾಗೇಶ್ ಓ. ಎಸ್.

ನಡೆದು ಹೋದರೆ ಕನಿಷ್ಠ 3 ಗಂಟೆ ಸಮಯ, ಜೀಪಿನಲ್ಲಿ ಹೋಗಬೇಕೆಂದಿದ್ದರೆ 25 ಕಿಲೋಮೀಟರ್ ದೂರದ ದಾರಿಯನ್ನ 2 ಗಂಟೆಗಳ ಕಾಲ ಸುತ್ತಿ ಬಳಸಿ ಕಾಫಿಡೇ ಮಾಲೀಕರ ಮಾಲಿಕತ್ವದ ಎಸ್ಟೇಟ್ ತಲುಪಿ ಅಲ್ಲಿಂದ ಮತ್ತೆ 1 ಕಿಲೋಮೀಟರ್ ಗುಡ್ಡ ಹತ್ತಬೇಕಿತ್ತು. ನಾವಿದ್ದ ಜಾಗಕ್ಕೆ ಜೀಪು ಬರಲು 1 ಗಂಟೆ ಸಮಯ ಹೀಗೆ ಯಾವ ಮಾರ್ಗದಲ್ಲಾದರೂ ಕನಿಷ್ಠ 3 ಗಂಟೆ. ಆ ಬಿಸಿಲಿನಲ್ಲಿ ನಡೆದು ಗುಡ್ಡ ಹತ್ತಿ ಸುಸ್ತಾಗುವುದಕ್ಕಿಂತ ನಮ್ಮ ಜೀಪಿನ (forest invader) ಮೂಲಕ ಸೊಂಟ ಉಳುಕಿಸಿಕೊಂಡಾದರೂ ಅಂಕು ಡೊಂಕಾದ ರಸ್ತೆಯಲ್ಲಿಯೇ ಸಾಗುವುದು ಸೂಕ್ತವೆಂದು ತೀರ್ಮಾನಿಸಿ ಜೀಪ್ ಏರಿ ಹೊರಡಲು ನಿರ್ಧರಿಸಿ ನಾವಿದ್ದ ಜಾಗಕ್ಕೆ ಜೀಪ್ ಬರುವಂತೆ ಬುಲಾವ್ ನೀಡಿ, ಆ ಬೆಂಕಿಯೊಂದಿಗಿನ ಸರಸಕ್ಕೆ ನಾವು ತಯಾರಾಗಲು ಅಣಿಯಾದೆವು.

ಕಾಡಿನಲ್ಲಿ ರಸ್ತೆ ಎಷ್ಟೆ ಚಂದವಿದ್ದರೂ ವೇಗವಾಗಿ ಜೀಪ್ ಚಲಿಸುವಂತಿಲ್ಲ; ಕಾರಣ ಅತಿ ವೇಗದಿಂದ ಪ್ರಾಣಿಗಳಿಗೆ ಹಾಗೂ ನಮಗೂ ತೊಂದರೆಯಾಗುತ್ತದೆ ಎಂದು. ಅಂತೂ ಸುತ್ತಿ ಬಳಸಿ ಎಸ್ಟೇಟ್ ತಲುಪಿದೆವು. ಸಮಯ ಮಧ್ಯಾಹ್ನ 2 ಗಂಟೆ; ಹಸಿವೂ ಹೆಚ್ಚಾಗಿತ್ತು. ಬೆಳಗ್ಗೆ ತಿಂದಿದ್ದ ತಿಂಡಿ ಅದಾಗಲೇ ಜೀರ್ಣವಾಗಿ ಸಣ್ಣ ಕರುಳಿನಿಂದ ದೊಡ್ಡಕರುಳು ತಲುಪಿಯಾಗಿತ್ತು. ಗಡಿಬಿಡಿಯಲ್ಲಿ ತಂದಿದ್ದ ಒಂದು ಬಾಟಲಿ ನೀರಿನ್ನೆ 7-8 ಜನ ಕುಡಿದು ಬೆಂಕಿಯ ಕಡೆಗೆ ಓಡಲಾರಂಭಿಸಿದೆವು. ಹೆಬ್ಬೆಗಿರಿ ಶೋಲಾ ಅರಣ್ಯವಾದ್ದರಿಂದ ಹುಲ್ಲುಗಾವಲಿನಲ್ಲಷ್ಟೆ ಬೆಂಕಿ ಉರಿಯುತ್ತಾ ನೂರಾರು ಎಕರೆಯಷ್ಟು ಹುಲ್ಲುಗಾವಲನ್ನು ಬೂದಿ ಮಾಡುತ್ತಾ ಮುಂದೆ ಸಾಗುತ್ತಿತ್ತು. ಬೆಂಕಿ ಹುಲ್ಲುಗಾವಲು ದಾಟಿದರೆ ಕೆಳಗಿದ್ದ ಎಲೆ ಉದುರುವ ಕಾಡಿಗೆ ಹಬ್ಬಿ ಸಾವಿರಾರು ಎಕರೆ ಅರಣ್ಯ ಭಸ್ಮವಾಗುವುದರಲ್ಲಿತ್ತು. ಹಾಗಾಗಿ ನಮ್ಮ ಸವಾಲು ಬೆಂಕಿಯನ್ನು ಹುಲ್ಲುಗಾವಲಿನಲ್ಲಿಯೇ ನಂದಿಸುವುದಾಗಿತ್ತು.

© ನಾಗೇಶ್ ಓ. ಎಸ್.

ಎಲ್ಲರೂ ಈಚಲ ಗಿಡದ ಗರಿಗಳನ್ನು ಕುಯ್ದು ಬೆಂಕಿ ಹರಡುತ್ತಿದ್ದ ದಿಕ್ಕಿನೆಡೆಗೆ ಓಡಿ ಬೆಂಕಿಯ ಮೇಲೆ ಬಡಿಯತೊಡಗಿದೆವು. ಬೆಂಕಿ ಬಡಿಯುತ್ತಾ ಮುಂದೆ ಸಾಗುತ್ತಾ ಒಬ್ಬರಿಗೊಬ್ಬರು ಕಾಣದಷ್ಟು ಮುಂದೆ ಸಾಗಿಯಾಗಿತ್ತು. ಸರಿಸುಮಾರು 2 ಗಂಟೆಗಳ ಕಾಲ ಖಾಲಿ ಹೊಟ್ಟೆಯಲ್ಲಿಯೇ ಬೆಂಕಿ ಬಡಿದಿದ್ದರಿಂದ ಡಿಹೈಡ್ರಾಷನ್ ಆಗಿ ನಿತ್ರಾಣಗೊಂಡಿದ್ದ ನಾನು ಕುಸಿದು ಬಿದ್ದಿದ್ದೆ. ಸ್ವಲ್ಪವಾದರು ನೀರು ಸಿಕ್ಕರೆ ಮಾತ್ರ ಬದುಕಿಕೊಳ್ಳಬಹುದೇನೋ ಎನ್ನುವಂತ ಸ್ಥಿತಿ ತಲುಪಿದ್ದೆ. ನಮ್ಮ ಹುಡುಗರಿಗಾಗಿ ಕೂಗಿದೆ, ದ್ವನಿ 10 ಮೀಟರ್ ಗಿಂತ ಹೆಚ್ಚು ದೂರ ಹೋಗಿಸುವಷ್ಟು ಶಕ್ತಿ ಇಲ್ಲವಾಗಿತ್ತು.

ನಾವು ನೋಡುವ ಎಲ್ಲ ನದಿಗಳ ಮೂಲಗಳು ಈ ಶೋಲಾ ಅರಣ್ಯಗಳೇ ಆಗಿರುತ್ತವೆ, ಹಾಗಾಗಿ ಅಲ್ಲಿಯೇ ನೀರಿನ ಮೂಲಕ್ಕಾಗಿ ಹುಡುಕಾಡಿದೆ. ಪ್ರತಿ ವರ್ಷ ಹುಲ್ಲುಗಾವಲಿಗೆ ಬೆಂಕಿ ಬೀಳುತ್ತಿದ್ದದುದರಿಂದಲೋ ಏನೋ ಬೇಸಿಗೆಯಲ್ಲಿ ನೀರು ಜಿನುಗಿಸುವ ಸಾಮರ್ಥ್ಯವನ್ನು ಕಳೆದುಕೊಂಡಿತ್ತೆನಿಸುತ್ತದೆ. ಆದರೂ ಒಂದು ಕಣಿವೆಯಲ್ಲಿ ಹಾವಸೆ ಸಸ್ಯಗಳ ಮೇಲಿಂದ ನೀರಿನ ಹನಿಗಳು ಜಿನುಗುತ್ತಿದ್ದುದ ಕಂಡೆ. ಬೊಗಸೆ ಹಿಡಿದರೆ ಬೊಗಸೆ ತುಂಬುವಷ್ಟು ನೀರೇನು ಬರುತ್ತಿರಲಿಲ್ಲವಾದ್ದರಿಂದ ಕಡೆಗೆ ನೇರವಾಗಿ ನಾಲಿಗೆಯ ಮೇಲೆ ನೀರಿನ ಹನಿಗಳು ಬೀಳುವಂತೆ ಮಾಡಿ ನಾಲಿಗೆ ಒದ್ದೆ ಮಾಡಿಕೊಂಡೆ. ಜೀವ ಉಳಿದಂತಾಯ್ತು. ನಂತರ ಕಾಫಿಡೇ ಎಸ್ಟೇಟ್ ಮ್ಯಾನೇಜರ್ ಗೆ ಕರೆ ಮಾಡಿ ನಾ ಇದ್ದ ಸ್ಥಳ ಮತ್ತು ಸ್ಥಿತಿ ವಿವರಿಸಿದೆ. ಅಲ್ಲಿನ ಕಾರ್ಮಿಕರು ಬಾಟಲಿಗಳಲ್ಲಿ ನೀರು ತುಂಬಿಸಿ ನಾ ಇದ್ದ ಸ್ಥಳ ಹುಡುಕಿ ಬಂದು ನೀರು ಕುಡಿಸಿದರು. ಅವರ ಹಿಂದೆ ಹುಲ್ಲುಗಾವಲಿಗೆ ಹಬ್ಬಿದ್ದ ಬೆಂಕಿಯನ್ನೆಲ್ಲಾ ನಂದಿಸಿ, ನೀರು ಕುಡಿದು ಹೆಮ್ಮೆಯಿಂದ ನಿಂತಿದ್ದರು ನಮ್ಮ ಹುಡುಗರು-ಹಸಿರ ಉಸಿರುಳಿಸುವ ಯೋಧರು.


ಲೇಖನ: ಶಂಕರ್ ಹೆಬ್ಬೆ
         

Print Friendly, PDF & Email
Spread the love
error: Content is protected.